ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರ ಘಟನೆ ನಡೆದಿದ್ದು, ಕಾಫಿ ತೋಟದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ 5-6 ಸಾಕು ನಾಯಿಗಳು ಭೀಕರವಾಗಿ ದಾಳಿ ಮಾಡಿದ್ದು, ಸ್ಥಿತಿ ಗಂಭೀರವಾಗಿದೆ. ಕಳಸ ತಾಲೂಕಿನ ಕೆಳಗೂರು ಗ್ರಾಮದ ಕಾಫಿ ತೋಟದಲ್ಲಿ ಘಟನೆ ನಡೆದಿದೆ.ಕಾಫಿ ಗಿಡದ ಕಸಿಗೆ ಬಂದಿದ್ದ ತಮಿಳುನಾಡಿನ ಕಾರ್ಮಿಕ ಕುಟುಂಬದ 7 ವರ್ಷದ ಮಾಧವ ನಾಯಿ ದಾಳಿಗೆ ಒಳಗಾದ ಬಾಲಕ.
ಕಾಫಿ ತೋಟದ ಕಾರ್ಮಿಕರ ಮಕ್ಕಳು ತೋಟದೊಳಗಿನ ಲೈನ್ ಮನೆಗಳ ಬಳಿ ಆಟವಾಡುತ್ತಿದ್ದರು. ಈ ವೇಳೆ 5-6 ಸಾಕು ನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ. ಮಗುವಿನ ತಲೆ, ಭುಜ, ಕುತ್ತಿಗೆಯಲ್ಲಿ ಗಂಭೀರ ಗಾಯಗಳಾಗಿವೆ. ಕೂಡಲೇ ಬಾಲಕನ ಪೋಷಕರು ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








