ಬೆಂಗಳೂರು : ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದ ಶೇ.25 ರಷ್ಟು ಪಾಲು ಹೊಂದಿರುವ ಕರ್ನಾಟಕ ಹಾಗೂ ಬೆಂಗಳೂರು ಅಭಿವೃದ್ಧಿಯ ಮುಂಚೂಣಿ ಪಥದಲ್ಲಿವೆ.ನಾಡಪ್ರಭು ಕೆಂಪೇಗೌಡರ ಕಲ್ಪನೆಯ ಬೆಂಗಳೂರಿನ ಸಮಗ್ರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಹಾಗೂ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರಗತಿ ಪ್ರತಿಮೆ ಲೋಕಾರ್ಪಣೆ ನಂತರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
ವಾಣಿಜ್ಯ,ಸಂಸ್ಕೃತಿ,ಪರಂಪರೆ,ಆಡಳಿತದ ಸಮರ್ಪಕ ಸಂಯೋಜನೆಯಿಂದ ಕೆಂಪೇಗೌಡರು ನಗರ ನಿರ್ಮಾಣಕ್ಕೆ ಬುನಾದಿ ಹಾಕಿದರು.ಇಂದು ಆಡಳಿತ,ವ್ಯಾಪಾರದ ರೂಪುರೇಷೆ ಬದಲಾದರೂ ಕೂಡ ಬೆಂಗಳೂರಿನ ಆರ್ಥಿಕತೆ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಸಾಗಿದೆ. ಭಾರತದ ಮೊದಲ ಮೇಕ್ ಇನ್ ಇಂಡಿಯಾ ವಂದೇ ಭಾರತ ರೈಲು ಕರ್ನಾಟಕದಿಂದ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ.ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಸಾಮಾಜಿಕ ಜಾಲತಾಣಗಳು ಹಾಗೂ ಭಾವಚಿತ್ರಗಳಲ್ಲಿರುವದಕ್ಕಿಂತಲೂ ಸುಂದರವಾಗಿದೆ.ಈ ನಾಡಿನ ಜನರ ಹಳೆಯ ಬೇಡಿಕೆ ಈಗ ಈಡೇರಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಮಾಡಿ,ಅವರ ಪಾದಗಳಿಗೆ ಜಲಾಭಿಷೇಕ ಮಾಡುವ ಅವಕಾಶ ದೊರೆತಿರುವುದು ತಮ್ಮ ಪಾಲಿನಸೌಭಾಗ್ಯವಾಗಿದೆ ಎಂದರು.
ಸ್ಟಾರ್ಟ್ ಅಪ್ಗಳ ಸ್ಫೂರ್ತಿಯ ಚಿಲುಮೆ
ಭಾರತವನ್ನು ಸಶಕ್ತಗೊಳಿಸಲು ಸ್ಟಾರ್ಟ್ ಅಪ್ಗಳು ರಹದಾರಿಯಾಗಿವೆ.ಬೆಂಗಳೂರು ಸ್ಟಾರ್ಟ್ ಅಪ್ ಯೋಜನೆಗಳ ಸ್ಫೂರ್ತಿಯ ಚಿಲುಮೆಯಾಗಿವೆ.ಯುವಶಕ್ತಿ,ಯುವಭಾರತದ ಪ್ರತಿಬಿಂಬ ಬೆಂಗಳೂರು .ವಂದೇ ಭಾರತ ಕೇವಲು ರೈಲು ಮಾತ್ರವಲ್ಲ ಅದು ನವಭಾರತದ ನಿರ್ಮಾಣದ ಪ್ರತೀಕ .ಈ ಹಿಂದೆ ಭಾರತದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು ಈಗ ಅವುಗಳು ಶಕ್ತಿಯಿಂದ ಓಡುತ್ತಿವೆ.400 ಕ್ಕೂ ಹೆಚ್ಚು ಹೊಸ ವಂದೇ ಭಾರತ್ ರೈಲುಗಳು ಭಾರತೀಯ ರೇಲ್ವೆಗೆ ಹೊಸ ಆಯಾಮ ನೀಡಿವೆ.ಸರಕು,ಸಾಗಣೆಗೆ ಅರ್ಪಿತವಾದ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ.ಹೊಸ ಹೊಸ ವಲಯಗಳನ್ನು ರೈಲು ಸಂಪರ್ಕಿಸುತ್ತಿದೆ.ಬೆಂಗಳೂರಿನಲ್ಲಿ ದೇಶದ ಮೊದಲ ಹವಾನಿಯಂತ್ರಿತ ಸರ್.ಎಂ.ವಿಶ್ವೇಶರಯ್ಯ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ.ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಸಮಗ್ರ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು.
ವೈಮಾನಿಕ ಸಂಪರ್ಕಜಾಲವು ವಿಸ್ತಾರವಾಗುತ್ತಿದೆ.ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತವು ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.2014 ರ ಪೂರ್ವದಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು ಈಗ ಅವು ದುಪ್ಪಟ್ಟಾಗಿದ್ದು 140 ಕ್ಕೆ ಏರಿವೆ .ಪ್ರಧಾನ ಮಂತ್ರಿ ಗತಿ ಶಕ್ತಿ,ಪಿಎಂ ಸ್ವನಿಧಿ,ಪಿಎಂ ಕಿಸಾನ್ ಸಮ್ಮಾನ್ ,ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ದೇಶ ಹಾಗೂ ರಾಜ್ಯದ ಪ್ರಗತಿಯನ್ನು ನಾಡಿನ ಜನರ ಮುಂದೆ ವಿವರಿಸಿದರು.
ಉದ್ದೇಶಿತ ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯು ಸಾರಿಗೆ ವೆಚ್ಚ ಕಡಿಮೆಗೊಳಿಸಿ,ಹೊಸತನ,ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ.ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಮೂಲಸೌಕರ್ಯಗಳ ವಿಕಸನಕ್ಕೂ ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಆದ್ಯತೆ ನೀಡಿದೆ.
ಕನಕದಾಸರು,ಓಬವ್ವ ಸ್ಮರಣೆ
ಭಗವದ್ ಶಕ್ತಿ ಹಾಗೂ ಸಾಮಾಜಿಕ ಶಕ್ತಿಯ ಜೋಡಣೆಯ ಪ್ರೇರಣೆ ಸಂತ ಕನಕದಾಸರಿಂದ ದೊರೆತಿದೆ.ಶ್ರೀಕೃಷ್ಣನ ಭಕ್ತರಾಗಿದ್ದ ಅವರು “ಕುಲ ಕುಲವೆಂದು ಹೊಡೆದಾಡದಿರಿ ” ಎಂದು ಸಹಬಾಳ್ವೆಯ ಸಂದೇಶ ಸಾರಿದರು.ರಾಮಧಾನ್ಯ ಚರಿತೆ ಕೃತಿಯ ಮೂಲಕ ರಾಗಿಯ ಮಹತ್ವದ ಜೊತೆಗೆ ಸಿರಿಧಾನ್ಯಗಳು ಹಾಗೂ ಸಾಮಾಜಿಕ ಸಂದೇಶ ಹಾಗೂ ವೀರ ವನಿತೆ ಒನಕೆ ಓಬವ್ವನ ಸಾಹಸ ಮನೋಭಾವವನ್ನು ಪ್ರಧಾನಿ ಪ್ರಶಂಸಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಟರ್ಮಿನಲ್ ಉದ್ಘಾಟನೆಯಾಗಿತ್ತು.ಇದೀಗ ಪ್ರಧಾನಿ ಮೋದಿಯವರು ಎರಡನೇ ಟರ್ಮಿನಲ್ ಲೋಕಾರ್ಪಣೆಯಾಗಿದೆ.ಮೆಟ್ರೋ ,ಉಪನಗರ ರೈಲು ಯೋಜನೆಗಳು ಬೆಂಗಳೂರಿನ ಸರ್ವಾಂಗೀಣ ವಿಕಾಸಕ್ಕೆ ಮುನ್ನುಡಿ ಬರೆಯುತ್ತಿವೆ.ಬೆಳಗಾವಿಯ ಸಾಮಾನ್ಯ ನಾಗರಿಕರಾದ ಶ್ರೀಠಾಣೇದಾರ್ ಎಂಬುವರು ಅಮೇರಿಕದ ಕಾಂಗ್ರೆಸ್ಸಿಗೆ ಸಂಸದರಾಗಿ ಚುನಾಯಿತರಾಗಿರುವುದು ಸಮಸ್ತ ಕನ್ನಡಿಗರು ಹಾಗೂ ಭಾರತೀಯರು ಹೆಮ್ಮೆಪಡಬೇಕಾದ ಸಂಗತಿಯಾಗಿದೆ ಎಂದರು.
ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ,ಕೊರೊನಾ ತುತ್ತ ತುದಿಯಲ್ಲಿದ್ದ ಸಂಕಷ್ಟದ ದಿನಗಳಲ್ಲಿ 2020 ರ ಜೂನ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು.ಸಂಸ್ಕೃತಿ,ಪರಂಪರೆ,ಆಧ್ಯಾತ್ಮ ಅರಿತವರು ಭವಿಷ್ಯ ಸೃಷ್ಟಿಸಬಲ್ಲರು.ಜ್ಞಾನದ ಜೊತೆ ಕರ್ಮ ಜ್ಞಾನವೂ ಬೇಕು.ಭಾರತ ಉಳಿದರೆ ಎಲ್ಲರೂ ಉಳಿಯುತ್ತಾರೆ.ಭಾರತ ಅಳಿದರೆ ಎಲ್ಲರೂ ಅಳಿಯುತ್ತಾರೆ.ಕೊರೊನಾ ಸಂಕಷ್ಟದ ಕಾಲವನ್ನು ಭಾರತ ಸಮರ್ಥವಾಗಿ ಎದುರಿಸಿ ದೇಶ ಮುನ್ನಡೆಯುತ್ತಿದೆ.ಸುಮಾರು 500 ವರ್ಷಗಳ ಹಿಂದೆ ಯಾವುದೇ ಜಾತಿ,ಪಂಥಗಳಿಗೆ ಸೀಮಿತವಾಗದೇ ದೂರದೃಷ್ಟಿಯಿಂದ ಮಾನವ ಸಂಪನ್ಮೂಲದ ಸದ್ವಿನಿಯೋಗ ಹಾಗೂ ಕೌಶಲ್ಯಗಳನ್ನು ಆಧರಿಸಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ 64 ಮಾರುಕಟ್ಟೆಗಳು ಬೆಂಗಳೂರನ್ನು ಆರ್ಥಿಕ,ವಾಣಿಜ್ಯ ಶಕ್ತಿ ಕೇಂದ್ರವಾಗಿಸಿವೆ .ಪ್ರಧಾನಿ ಮೋದಿಯವರೂ ಕೂಡ ಅಂತಹ ದೂರದೃಷ್ಟಿಯ ನೇತಾರರಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರು -ಮೈಸೂರು ಹಾಗೂ ಬೆಂಗಳೂರು-ಚೆನ್ನೈ ಮಹಾನಗರಗಳಿಗೆ ಸಂಪರ್ಕಿಸುವ ವಂದೇಭಾರತ್ ರೈಲು ನೀಡಿದ್ದಾರೆ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಎರಡನೇ ಟರ್ಮಿನಲ್ ಲೋಕಾರ್ಪಣೆ ಮೂಲಕ ಇದು ದೇಶದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದರು.
ವಿಜಯನಗರದ ಕಾಲದ ಸುವರ್ಣಯುಗದ ದರ್ಶನವನ್ನು ನಾಡಪ್ರಭು ಕೆಂಪೇಗೌಡರಯ ಯೋಜನಾಬದ್ಧ ನಗರ ನಿರ್ಮಾಣದ ಮೂಲಕ ತಮ್ಮ ದೂರದೃಷ್ಟಿಯ ಕನಸುಗಳನ್ನು ಸಾಕಾರಗೊಳಿಸಿದರು.ಅವರ ವಿಚಾರ,ರೀತಿ,ನೀತಿಗಳ ಧಾರೆಯಲ್ಲಿ ನಾಡು ಕಟ್ಟಲು ಸರ್ಕಾರ ಸಂಕಲ್ಪ ಮಾಡುತ್ತದೆ.ದೇಶದ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಯಲ್ಲಿ ಸರ್ವರಿಗೂ ಸಮಪಾಲು ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ನವಭಾರತ ನಿರ್ಮಾಣಕ್ಕಾಗಿ ಕನ್ನಡ ನಾಡಿನ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ಅನೇಕ ಕೊಡುಗೆಗಳನ್ನು ನಿರಂತರವಾಗಿ ನೀಡುತ್ತಿರುವುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೆಮ್ಮೆಯಿಂದ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಜೊತೆಗೆ ಸಂತ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ವೇದಿ ಕೆಯಲ್ಲಿ ಅವರ ಭಾವಚಿತ್ರಗಳಿಗೆ ಪ್ರಧಾನಿಯವರು ಗೌರವ ಸಲ್ಲಿಸಿದರು.ಪ್ರಧಾನ ಮಂತ್ರಿಯವರಿಗೆ ಪ್ರಗತಿ ಪ್ರತಿಮೆಯ ಬೆಳ್ಳಿಯ ಪ್ರತಿಕೃತಿ ನೀಡಿ ಮುಖ್ಯಮಂತ್ರಿಯವರು ಗೌರವಿಸಿದರು.ಕೆಂಪೇಗೌಡರ ಕುರಿತ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್,ಕೇಂದ್ರ ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ,ನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ,ಭಗವಂತ್ ಖೂಬಾ,ಶೋಭಾ ಕರಂದ್ಲಾಜೆ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸಂಸದ ಸದಾನಂದಗೌಡ, ಸಚಿವರಾದ ಅರಗ ಜ್ಞಾನೇಂದ್ರ,ಸಿ.ಎನ್.ಅಶ್ವತ್ಥನಾರಾಯಣ,ಆರ್.ಅಶೋಕ,ನಾರಾಯಣಗೌಡ,ಸುನೀಲ್ಕುಮಾರ್,ಬಿ.ಎ.ಬಸವರಾಜ,ಕೆ.ಗೋಪಾಲಯ್ಯ,ಮುನಿರತ್ನ,ಎಂ.ಟಿ.ಬಿ.ನಾಗರಾಜ,ವಿ.ಸೋಮಣ್ಣ,ಡಾ.ಕೆ.ಸುಧಾಕರ್,ಎಸ್.ಟಿ.ಸೋಮಶೇಖರ್ ಅವರು ವೇದಿಕೆಯಲ್ಲಿದ್ದರು. ಮನಸೆಳೆದ ಕಲಾಪ್ರದರ್ಶನ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾತಂಡಗಳ ಕಲಾವಿದರು ಪ್ರದರ್ಶಿಸಿದನಾಡಪ್ರಭು ಕೆಂಪೇಗೌಡರ ಬದುಕು,ಸಾಧನೆಗಳ ಕುರಿತ ನೃತ್ಯರೂಪಕ,ನಾಟಕ,ಜನಪದ ಹಾಗೂ ಶಾಸ್ತ್ರೀಯ ಸಂಗೀತ , ಕನ್ನಡ ನಾಡಗೀತೆಗಳು ಗಮನ ಸೆಳೆದವು.