ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೋಮು ಗಲಭೆ ಘಟನೆಗಳು ನಡೆದೇ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿದೆ. ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಿದ್ದು, ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ. ನಮ್ಮ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಿದ್ದು, ರಾಜ್ಯದಲ್ಲಿ ಕೋಮುಗಲಭೆ ನಡೆದಿಲ್ಲ. ನಡೆಯಲೂ ಬಿಡುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದುಶ್ಚಟಗಳಿಂದ ಯುವ ಸಮುದಾಯವನ್ನು ರಕ್ಷಿಸಲು ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆ ಕುರಿತು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಂತ್ರಜ್ಞಾನದಿಂದ ಅಂಥ ಪ್ರಕರಣ ಪತ್ತೆಮಾಡಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.








