ಬೆಂಗಳೂರು : ಕಳೆದ 14 ವರ್ಷದಿಂದ ಅದಾನಿ ಕಂಪನಿ ರಾಜ್ಯವನ್ನು ಲೂಟಿ ಮಾಡುತ್ತಿದೆ. ಬೆಲೆಕೇರಿಯಲ್ಲಿ ಮುಟ್ಟುಗೋಲು ಹಾಕಿದ್ದ ಕಬ್ಬಿಣದ ಅದಿರನ್ನು ದೋಚಿದೆ.ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ಅದಾನಿ ಕಂಪನಿ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ವರದಿ ನೀಡಿತ್ತು. ಆಗ ಬೆಲೆಕೇರಿಯಲ್ಲಿ ಅದಿರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮುಟ್ಟುಗೋಲು ಹಾಕಿಕೊಂಡಿದ್ದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಲಾಗಿದೆ. ಅದಾನಿ ಕಂಪನಿ ಸೇರಿದಂತೆ ನಾಲ್ಕು ಕಂಪನಿಗಳು ಅಕ್ರಮವಾಗಿ ಅದಿರನ್ನು ಸಾಗಿಸಿದ್ದವು ಎಂದು ಹರಿ ಪ್ರಸಾದ್ ತಿಳಿಸಿದರು.
ಕಬ್ಬಿಣದ ಅದಿರು ಅಕ್ರಮ ಸಾಗಾಟದ ಬಗ್ಗೆ ಅದಾನಿ ಎಂಟರ್ಪ್ರೈಸಸ್, ಮಲ್ಲಿಕಾರ್ಜುನ್ ಶಿಪ್ಪಿಂಗ್ ಲಿಮಿಟೆಡ್, ಬೆಳಗಾಂವ್ಕರ್ ಮೈನಿಂಗ್ ಹಾಗೂ ರಾಜಮಹಲ್ ಸಿಲ್ಕ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2006 ರಿಂದ 2010ರ ವರೆಗೆ ಅಕ್ರಮವಾಗಿ ಅದಿರನ್ನು ಸಾಗಿಸಲಾಗಿದೆ. ಬೇಲೆಕೇರಿ ಬಂದರಿಗೆ 77.38 ಕೋಟಿ ಟನ್ ಸಾಗಿಸಲಾಗಿತ್ತು. ನಿಗದಿಕ್ಕಿಂತ ಹೆಚ್ಚು ಅದಿರನ್ನು ಅಕ್ರಮವಾಗಿ ಸಾಗಿಸಲಾಗಿತ್ತು 2010ರಲ್ಲಿ ಲೋಕಾಯುಕ್ತ ದಾಳಿಯ ವೇಳೆ ಈ ಅಕ್ರಮ ಬಯಲಾಗಿತ್ತು ಎಂದು ಎಂ ಎಲ್ ಸಿ ಬಿ.ಕೆ ಹರಿ ಪ್ರಸಾದ್ ತಿಳಿಸಿದರು.
ಈ ಬಗ್ಗೆ ದಾಖಲೆ ಸಮೇತ ಕೇಸ್ ದಾಖಲಿಸಲಾಗಿತ್ತು. ಅಂದಾನಿ ಕಂಪನಿಯಿಂದ ಹಣ ಸಂದಾಯ ಆಗಿರುವುದು ಪತ್ತೆಯಾಗಿದೆ. ಪ್ರವೀಣ್ ಬಜಪೆ, ಡೇವಿಡ್, ಮಿತ್ತಲ್ ಹಾಗೂ ಮನೋಜ್ ಝಾ ಎಂಬುವರಿಗೆ ಹಣ ಕಳಿಸಿರುವುದು ಪತ್ತೆಯಾಗಿದೆ. ಹಾಗಾಗಿ ನಾಲ್ಕು ಕಂಪನಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.