ಬೆಂಗಳೂರು : ಇಂದು ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ ಫೈನಲ್ ಮ್ಯಾಚ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮ ಆಚರಣೆಯ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ಹೌದು ಪಂದ್ಯದ ಬಳಿಕ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈಗಾಗಲೇ ನಗರದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಿದ್ರೆ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಇಲ್ಲದೇ ಎಲ್ಇಡಿ ಸ್ಕ್ರೀನ್ ಅಳವಡಿಸಿದ್ರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.
18 ವರ್ಷಗಳ ಕನಸನ್ನು ಹೊತ್ತುಕೊಂಡು ಫೈನಲ್ಗೆ ಲಗ್ಗೆಯಿಟ್ಟಿರುವ ಆರ್ಸಿಬಿ ಇಂದು ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಸೆಣಸಾಡಲಿದೆ. ಹೀಗಾಗಿ ಬಹುಕಾಲದ ಆಸೆ ಈಡೇರಿಕೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ 7:30ಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.