ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಅತಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದ 77 ವರ್ಷದ ಸಿದ್ದರಾಮಯ್ಯ ಅವರಿಗೆ ಈಗ ಈ ಹೊಸ ಪಟ್ಟ ಒಲಿದುಬಂದಿದೆ.
ಪಿಣರಾಯಿ ವಿಜಯನ್ ನಿರ್ಗಮನ, ಸಿದ್ದುಗೆ ಅಗ್ರಸ್ಥಾನ
ಈವರೆಗೆ ಕೇರಳದ ಮುಖ್ಯಮಂತ್ರಿಯಾಗಿದ್ದ 82 ವರ್ಷದ ಪಿಣರಾಯಿ ವಿಜಯನ್ ಅವರು ದೇಶದ ಅತಿ ಹಿರಿಯ ಮುಖ್ಯಮಂತ್ರಿಯಾಗಿದ್ದರು. ಆದರೆ, ಚುನಾವಣೆಯಲ್ಲಿ ಅವರ ಸೋಲು ಮತ್ತು ರಾಜೀನಾಮೆಯ ನಂತರ, ಆ ಸ್ಥಾನಕ್ಕೆ ಈಗ ಸಿದ್ದರಾಮಯ್ಯ ಏರಿದ್ದಾರೆ.
ದೇಶದ ಹಿರಿಯ ಮುಖ್ಯಮಂತ್ರಿಗಳ ಪಟ್ಟಿ ಇಂತಿದೆ:
ಸಿದ್ದರಾಮಯ್ಯ (ಕರ್ನಾಟಕ): 77 ವರ್ಷ.
ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ): 75 ವರ್ಷ.
ಲಾಲ್ದುಹೋಮ (ಮಿಜೋರಾಂ): 74 ವರ್ಷ.
ನೆಫ್ಯು ರಿಯೋ (ನಾಗಾಲ್ಯಾಂಡ್): 74 ವರ್ಷ.
ರಂಗಸಾಮಿ (ಪುದುಚೇರಿ): 74 ವರ್ಷ.
ಅತಿ ಕಿರಿಯ ಸಿಎಂ ಯಾರು?
ದೇಶದ ಅತಿ ಹಿರಿಯ ಮುಖ್ಯಮಂತ್ರಿ ಕರ್ನಾಟಕದವರಾಗಿದ್ದರೆ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು (46) ಅವರು ದೇಶದ ಅತಿ ಕಿರಿಯ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ.
ಸುದೀರ್ಘ ಅವಧಿಯ ದಾಖಲೆ
2ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು, 2026ರ ಜನವರಿ 6ರಂದು 2,792 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದರು. ಆ ಮೂಲಕ ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ನಾಯಕ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ.
ಒಟ್ಟಾರೆಯಾಗಿ ನೋಡುವುದಾದರೆ, ತಮಿಳುನಾಡಿನ ಮಾಜಿ ಸಿಎಂ ದಿವಂಗತ ಎಂ. ಕರುಣಾನಿಧಿ (92) ಅವರು ಈವರೆಗಿನ ಇತಿಹಾಸದಲ್ಲಿ ರಾಜ್ಯವೊಂದನ್ನು ಆಳಿದ ಅತಿ ಹಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ.








