ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಅನಧಿಕೃವಾಗಿ ಬಾಂಗ್ಲಾ ನುಸುಳುಕೋರರ ವಿರುದ್ಧ ವಿಳಂಬವಾಗಿ ಕ್ರಮ ಕೈಗೊಂಡಿರುವ ಬಗ್ಗೆ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿತ್ತು. ಈ ಬೆನ್ನಲ್ಲೇ, ಬಾಂಗ್ಲಾದೇಶ ಸೇರಿ ವಿವಿಧ ದೇಶಗಳಿಂದ ಬಂದು ರಾಜ್ಯದಲ್ಲಿ ಬೀಡುಬಿಟ್ಟಿದ್ದ ಅಕ್ರಮ ವಲಸಿಗರ ಪತ್ತೆ, ಗಡಿಪಾರು ಹಾಗೂ ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಯೂರಿದ್ದ 432 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 255 ಮಂದಿಯನ್ನು ಪೊಲೀಸ್ ಇಲಾಖೆ ಗಡಿಪಾರು ಮಾಡಿದೆ. ಇದರ ಪೈಕಿ 370 ಮಂದಿ ಬಾಂಗ್ಲಾದೇಶದವರಾಗಿದ್ದಾರೆ.
ಅಲ್ಲದೆ, ಪಾಕಿಸ್ತಾನದ 16 ಹಾಗೂ ಶ್ರೀಲಂಕಾದ 42 ಮಂದಿ ಇದ್ದಾರೆ. ಮೂರು ವರ್ಷಗಳಲ್ಲಿ 255 ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. 178 ಜನರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇವರ ವಿರುದ್ದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.








