ಬಾಲ್ಯ ವಿವಾಹ ನಿಷೇಧ ಜಾಗೃತಿ ಸಂಚಾರಿ ರಥ ವಾಹನಕ್ಕೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ. ಸಾತ್ವಿಕ್ ಅವರು ಜನವರಿ 31ರಂದು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಹಸಿರು ನಿಶಾನೆ ತೋರಿದರು.
ಈ ವೇಳೆ ಅವರು ಮಾತನಾಡಿ, ಬಾಲ್ಯ ವಿವಾಹವು ಅತ್ಯಂತ ಕೆಟ್ಟ ಪಿಡುಗಾಗಿದ್ದು, ಇದು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಹಾಗೂ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆ ಮಾಡಿಕೊಳ್ಳುವವರಿಗೆ, ಮಾಡುವವರಿಗೆ, ಬೆಂಬಲ ನೀಡುವವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ರಂತೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಹುಡುಗಿಗೆ ಹದಿನೆಂಟು ವರ್ಷ ಹಾಗೂ ಹುಡುಗನಿಗೆ ಇಪ್ಪತ್ತೊಂದು ವರ್ಷ ತುಂಬುವವರೆಗೆ ಯಾವುದೇ ಕಾರಣಕ್ಕೂ ವಿವಾಹ ಮಾಡಿಕೊಳ್ಳಬಾರದು. ಮತ್ತು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಹಾವಿನ ಅವರು ಮಾತನಾಡಿ, ಮಕ್ಕಳು ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಣದ ಕಡೆಗೆ ಒತ್ತು ನೀಡಿ ಚೆನ್ನಾಗಿ ಅಭ್ಯಾಸ ಮಾಡಿ ತಂದೆ ತಾಯಿಯ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಸಂಚಾರಿ ರಥ ವಾಹನದ ಮೂಲಕ ಜಾಗೃತಿ: ನಂತರ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಿಂದ ನಗರದ ಸ್ಟೇಷನ್ ವೃತ್ತದವರೆಗೆ ಬಾಲ್ಯ ವಿವಾಹ ಜಾಗೃತಿ ಕುರಿತು ಸಂಚಾರಿ ರಥ ವಾಹನದ ಮೂಲಕ ಮಕ್ಕಳೊಂದಿಗೆ ಜಾಥಾ ನಡೆಯಿತು. ಇದಕ್ಕೂ ಮುಂಚೆ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ನವೀನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಈರಣ್ಣ ಕೋಸಗಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುದರ್ಶನ್ ಹಾಗೂ ಕಾಲೇಜಿನ ಪ್ರಾಚಾರ್ಯ ಕುಂಟೆಪ್ಪ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಹಾಗೂ ಮಾರ್ಗದರ್ಶಿ ಸಂಸ್ಥೆಯ ಅನಂದರಾಜ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.








