ರಾಯ್‌ಪುರ: ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಭುವಿ ಮತ್ತೆ ‘ಪರ್ಪಲ್ ಕ್ಯಾಪ್’ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಗ್ಲೆನ್ ಮೆಗ್ರಾತ್ ದಾಖಲೆ ಸರಿಗಟ್ಟಿದ ಭುವಿ
ಐಪಿಎಲ್ ಇತಿಹಾಸದಲ್ಲಿ 36 ವರ್ಷ ದಾಟಿದ ನಂತರ 4 ವಿಕೆಟ್‌ಗಳ ಗೊಂಚಲು ಪಡೆದ ವಿಶ್ವದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಭುವನೇಶ್ವರ್ ಪಾತ್ರರಾಗಿದ್ದಾರೆ. 2008ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಗ್ಲೆನ್ ಮೆಗ್ರಾತ್ (38 ವರ್ಷ) ಅವರು ಈ ಸಾಧನೆ ಮಾಡಿದ್ದರು. ಅವರ ನಂತರ ಕಳೆದ 18 ವರ್ಷಗಳಲ್ಲಿ ಯಾವುದೇ ವೇಗಿ ಈ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರಲಿಲ್ಲ.
ಪ್ರಮುಖ ದಾಖಲೆಗಳು:
ಹಿರಿಯ ಭಾರತೀಯ ವೇಗಿ: ಐಪಿಎಲ್ ಇತಿಹಾಸದಲ್ಲಿ 4 ವಿಕೆಟ್ ಪಡೆದ ಅತ್ಯಂತ ಹಿರಿಯ ಭಾರತೀಯ ವೇಗಿ ಎಂಬ ಆಶಿಶ್ ನೆಹ್ರಾ ಅವರ ದಾಖಲೆಯನ್ನು ಭುವಿ (36 ವರ್ಷ, 94 ದಿನ) ಮುರಿದಿದ್ದಾರೆ.
ಮುಂಬೈ ವಿರುದ್ಧದ ದಾಖಲೆ: ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಪಡೆದ ಅತ್ಯಂತ ಹಿರಿಯ ವೇಗಿ ಎಂಬ ಮೋಹಿತ್ ಶರ್ಮಾ ಅವರ ದಾಖಲೆಯೂ ಈಗ ಭುವಿ ಹೆಸರಿಗಿದೆ.








