ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಎರಡು ಕೋಮಿನ ನಡುವೆ ಉಂಟಾದಂತ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೇ ಮತ್ತೊಂದು ಘಟನೆಯಲ್ಲಿ ಓರ್ವನಿಗೆ ಚಾಕು ಇರಿದಿರುವಂತ ಘಟನೆಯೂ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗಾಂಧಿ ವೃತ್ತದಲ್ಲಿ ಹರೀಶ್, ಗೌತಮ್, ಜಹೀರ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಇದಕ್ಕೆ ಕಾರಣ ಕೆಲ ತಿಂಗಳ ಹಿಂದೆ ಗೌತಮ್ ಹಾಕಿದ್ದ ಸ್ಟೇಟಸ್ ಗೆ ಜಹೀರ್ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಗಲಾಟೆಯಾದ ಪರಿಣಾಮ ಅರವಿಂದ್, ಗೌತಮ್ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಭದ್ರಾವತಿಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಈ ವಿಷಯ ತಿಳಿದು ಆಸ್ಪತ್ರೆಯ ಮುಂದೆ ಜಮಾಯಿಸಿದಂತ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ರಿಜ್ವಾನ್ ಎಂಬಾತನ ಕೈಗೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಇರಿತಕ್ಕೊಳಗಾದಂತ ರಿಜ್ವಾನ್ ಅನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಭದ್ರಾವತಿಯ ತಾಲೂಕು ಆಸ್ಪತ್ರೆಯ ಮುಂದೆ ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಹಳೇ ನಗರ ಠಾಣೆಯ ಪೊಲೀಸರು ಸ್ಥಳದಲ್ಲಿ ಗುಂಪುಗೂಡಿದ್ದಂತ ಜನರನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂಬುದಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.