ಬೆಂಗಳೂರು: ಆನ್ ಲೈನ್ ಮೂಲಕ ಬೆಸ್ಕಾಂ ಗ್ರಾಹಕರನ್ನು ( BESCOM Customer ) ವಂಚಿಸಿ ಹಣ ವಸೂಲಿ ಮಾಡುತ್ತಿರುವ ಸೈಬರ್ ವಂಚಕರ ಜಾಲದ ವಿರುದ್ದ ಕ್ರಮ ಜರಗಿಸಲು ಕೋರಿ ಸೈಬರ್ ಕ್ರೈಂ ಠಾಣೆಗೆ ( Cyber Crime Police Station ) ಬೆಸ್ಕಾಂ ದೂರು ನೀಡಿದೆ.
ಸೈಬರ್ ವಂಚಕರ ಕುರಿತು ಬೆಸ್ಕಾಂ ತನ್ನ ಗ್ರಾಹಕರಿಗೆ ಸಾಕಷ್ಟು ಅರಿವು ಮೂಡಿಸುತ್ತಿದ್ದರೂ, ಗ್ರಾಹಕರು ಸೈಬರ್ ವಂಚಕರ ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ. ವಿದ್ಯುತ್ ಶುಲ್ಕ ಪಾವತಿಸುವಂತೆ ಎಸ್ಎಂಎಸ್ ಬಂದಿರುವ ಕುರಿತು ಸುಮಾರು 16 ಗ್ರಾಹಕರು ಜೂನ್ ಮತ್ತು ಜುಲೈ ತಿಂಗಳಲ್ಲಿ 1912 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
BREAKING NEWS: ರಾಜ್ಯ ಸರ್ಕಾರದಿಂದ ವಿವಿಧ ಟ್ರಸ್ಟ್, ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷರು, ಸದಸ್ಯರ ನೇಮಿಸಿ ಆದೇಶ
ಗ್ರಾಹಕರ ಮಾಹಿತಿ ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿರುವ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
“ಸೈಬರ್ ವಂಚಕರು ಬೆಸ್ಕಾಂ ಹೆಸರಿನಲ್ಲಿ ಗ್ರಾಹಕರಿಗೆ ಎಸ್ಎಂಎಸ್ ಕಳುಹಿಸಿ, ವಿದ್ಯುತ್ ಬಿಲ್ ಪಾವತಿಸದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಎಂಬ ಭಯದಿಂದ ಗ್ರಾಹಕರು ತಕ್ಷಣವೇ ಆನ್ ಲೈನ್ ಮೂಲಕ ಹಣ ಪಾವತಿಸಿ ಮೋಸ ಹೋಗುತ್ತಿದ್ದಾರೆ” ಎಂದು ಬೆಸ್ಕಾಂ ನ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಬಂಧ) ಎಸ್. ಆರ್. ನಾಗರಾಜ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಸೈಬರ್ ಅಪರಾಧ ವಿಭಾಗದ ಪೊಲೀಸರು, ಗ್ರಾಹಕರಿಗೆ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಿಂದ ಗ್ರಾಹಕರಿಗೆ ಎಸ್ ಎಂಎಸ್ ಮತ್ತು ಕರೆಗಳು ಬಂದಿದ್ದು, ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದೊಂದು ಸಂಘಟಿತ ಅಪರಾಧವಾಗಿದ್ದು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಜೊತೆಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.
ಸೈಬರ್ ವಂಚನೆ ವಿವರ: ಬೆಸ್ಕಾಂ ಗ್ರಾಹಕರಿಗೆ ಅನಾಮದೇಯ ಸಂಖ್ಯೆಗಳಿಂದ ಎಸ್ಎಂಎಸ್ ಗಳು ಬರುತ್ತಿದ್ದು, ಗ್ರಾಹಕರು ಎಸ್ಎಂಎಸ್ ಕಳುಹಿಸಿದ ಸಂಖ್ಯೆಗೆ ಕರೆ ಮಾಡಿದ ತಕ್ಷಣ ಸೈಬರ್ ವಂಚಕರು ಹಿಂದಿ ಭಾಷೆಯಲ್ಲಿ ವ್ಯವಹರಿಸಿ ಗ್ರಾಹಕರಿಗೆ ಆನ್ ಲೈನ್ ನಲ್ಲಿ ಹಣ ಪಾವತಿಸಲು ಲಿಂಕ್ ಕಳುಹಿಸಿ ಹಣ ಲಪಟಾಯಿಸುತ್ತಾರೆ. ಸೈಬರ್ ವಂಚಕರ ಟಾರ್ಗೆಟ್ ಐಟಿ ಉದ್ಯೋಗಿಗಳಾಗಿರುವುದು ಬೆಳಕಿಗೆ ಬಂದಿದೆ.
ವಿದ್ಯುತ್ ಬಿಲ್ ಪಾವತಿಸುವಂತೆ ಬೆಸ್ಕಾಂ ತನ್ನ ಗ್ರಾಹಕರಿಗೆ ಎಸ್ಎಂಎಸ್ ಕಳುಹಿಸುವುದಿಲ್ಲ ಅಥವಾ ಕರೆ ಮಾಡುವುದಿಲ್ಲ.
ಬೆಸ್ಕಾಂ ತನ್ನ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ, ಆನ್ ಲೈನ್ ವಂಚನೆ ಬಗ್ಗೆ ಗ್ರಾಹಕರಿಗೆ ನಿರಂತರ ಮಾಹಿತಿ ನೀಡುತ್ತಿದ್ದು, ಗ್ರಾಹಕರು ವಿದ್ಯುತ್ ಬಿಲ್ ಗಳನ್ನು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರ,ಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ ಆ್ಯಪ್, ಬೆಸ್ಕಾಂ ಕಚೇರಿ ಮತ್ತು ಬೆಸ್ಕಾಂ ವೆಬ್ ಸೈಟ್ ಮೂಲಕವೇ ಹಣ ಪಾವತಿಸಲು ಕೋರಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.