ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ನೋಂದಣಿ, ಜನ ಸ್ನೇಹಿ ವಿದ್ಯುತ್ ಸೇವೆಗಳು ಸೇರಿದಂತೆ ಹಲವು ವಿದ್ಯುತ್ ಸೇವೆಗಳಿಗಾಗಿ ರೂಪಿಸಲಾಗಿರುವ ಆರ್- ಎಪಿಡಿಆರ್ ಪಿ ತಂತ್ರಾಂಶದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದ್ದು, ಎಲ್ಲಾ 5 ಎಸ್ಕಾಂಗಳ ಗ್ರಾಹಕರಿಗೆ 24 ಗಂಟೆಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಜುಲೈ 2022 ರಲ್ಲಿ ಹಾರ್ಡ್ ವೇರ್ ನಲ್ಲಿ ಕಂಡು ಬಂದ ದೋಷದಿಂದಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾಫ್ಟ್ ವೇರ್ ನಿರ್ವಹಣೆಗೆ ಅಡಚಣೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಗ್ರಾಹಕರು ವೆಬ್ ಪೋರ್ಟ್ ಲ್ ಗೆ ಲಾಗ್ ಇನ್ ಆಗಲು, ಬೆಸ್ಕಾಂ ( BESCOM ) ವ್ಯಾಪ್ತಿಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಇತರ ಎಸ್ಕಾಂಗಳಿಗೆ ಮಧ್ಯಾಹ್ನ 1.30 ರಿಂದ ಸಂಜೆ 7ರವರೆಗೆ ಸಮಯ ನಿಗದಿ ಪಡಿಸಲಾಗಿತ್ತು.
ಇದೀಗ ಕೆಲವು ಹೆಚ್ಚುವರಿ ಸರ್ವರ್ ಗಳು ಮತ್ತು ತಂತ್ರಾಂಶಗಳ ಉನ್ನತೀಕರಣದೊಂದಿಗೆ 24 ಗಂಟೆಗಳ ನಿರಂತರ ಸೇವೆಗೆ ಆರ್- ಎಪಿಡಿಆರ್ ವೆಬ್ ಅಪ್ಲಿಕೇಷನ್ ನನ್ನು ಸಿದ್ದಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ( Bescom Managing Director Mahantesh Bilagi ) ತಿಳಿಸಿದ್ದಾರೆ.
ಆರ್- ಎಪಿಡಿಆರ್ ಪಿ ( ಪುನರ್ ರಚಿಸಿದ ವೇಗವರ್ದಿತ ವಿದ್ಯುತ್ ಅಭಿವೃದ್ದಿ ಮತ್ತು ಸುಧಾರಣಾ ಕ್ರಮಗಳು) ತಂತ್ರಾಂಶ 12 ವರ್ಷಗಳ ಹಳೆಯದಾಗಿರುವುದರಿಂದ ಗ್ರಾಹಕರು ಸರ್ವರ್ ಗೆ ಒಮ್ಮಲೇ ಲಾಗ್ ಇನ್ ಆದ ಸಂದರ್ಭದಲ್ಲಿ ಮಾತ್ರ ಅಡಚಣೆ ಉಂಟಾಗುತ್ತಿದ್ದು, ಅದನ್ನು ಸರಿಪಡಿಸಲು ಬೆಸ್ಕಾಂ ಕ್ರಮವಹಿಸುತ್ತಿದೆ ಎಂದು ಅವರು ತಿಳಿಸಿದರು.
ಕಳೆದ 12 ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆ ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಕಾರಣಾಂತರಗಳಿಂದ ಹಿಂದೆ ಸರಿದಿರುವುದರಿಂದ ಹೊಸದಾಗಿ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್ ಕರೆದು ಆಯ್ಕೆಯಾದ ಇನ್ಫೈನೈಟ್ ಕಂಪ್ಯೂಟರ್ ಸಲ್ಯೂಷನ್ಸ್ ಕಂಪನಿಗೆ ಕಾರ್ಯಾದೇಶ ನೀಡಿ ತಂತ್ರಾಂಶ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.
ಸದ್ಯ ಕಾರ್ಯನಿರ್ವಹಿಸುತ್ತಿರುವ ತಂತ್ರಾಂಶದ ಲೋಪದೋಷಗಳನ್ನು ಶಾಶ್ವತವಾಗಿ ಬಗೆಹರಿಸಲು ಹೊಸ ತಂತ್ರಾಂಶವನ್ನು ಸಿದ್ದಪಡಿಸಲಾಗುತ್ತಿದ್ದು, ಇನ್ನು 4-5 ತಿಂಗಳಲ್ಲಿ ಹೊಸ ತಂತ್ರಾಂಶ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.