ಬೆಂಗಳೂರು : ಇತ್ತೀಚಿಗೆ ಅಮಾಯಕರನ್ನು ಮೋಸ ಮಾಡಿ ಅವರಿಂದ ಹಣ ಸುಲಿಗೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಬೆಸ್ಕಾಂ ಅಧಿಕಾರಿಯೊಬ್ಬ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ರೈತರು ಸೇರಿದಂತೆ ಹಲವರಿಗೆ ಲಕ್ಷಾಂತರ ರೂಪಾಯಿಯನ್ನು ವಂಚನೆ ಮಾಡಿದ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಇದೀಗ ಆರೋಪಿಯನ್ನು ಕೂಡ ಬಂಧಿಸಲಾಗಿದೆ.
ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರ್ ಎಂಬುವವರನ್ನು ಬೆಂಗಳೂರಿನ(Bengaluru) ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಕೆಐಡಿಬಿಯಿಂದ ರೈತರಿಗೆ ಹಣ ಕೊಡಿಸುವ ನೆಪದಲ್ಲಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ. ಜೊತೆಗೆ ತನ್ನ KA 09 MF 0656 ಸಂಖ್ಯೆಯ ರೆನಾಲ್ಟ್ ಕ್ವಿಡ್ ಕಾರಿಗೆ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಕೆ ಮಾಡಿದ್ದ ಎಂದು ಆರೋಪ ಕೇಳಿಬಂದಿದೆ.
ಪೊಲೀಸ್ ಜಾಗೃತದಳದ ಫಲಕ ಅಳವಡಿಸಿದ್ದ ಹಿನ್ನಲೆ ಹೆದ್ದಾರಿ ಟೋಲ್ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ದೊರಕುತ್ತಿತ್ತು. ಹೀಗಾಗಿ ಆತನನ್ನು ಯಾರೇ ಏನೇ ಪ್ರಯಾಣಿಸಿದರು ಪೊಲೀಸ್ ಐಡಿ ಕಾರ್ಡ್ ತೋರಿಸುತ್ತಿದ್ದ ಇದನ್ನೇ ದುರ್ಬಳಕೆ ಮಾಡಿಕೊಂಡ ಆತ,ಹಲವು ವರ್ಷಗಳಿಂದ ಇದೇ ರೀತಿ ಹಣ ಪಡೆದು ವಂಚಿಸುತ್ತಿದ್ದ ಹಿನ್ನಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ.