ಬೆಂಗಳೂರು: ರಾಜ್ಯ ಸರ್ಕಾರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳೋದಕ್ಕೆ ಕಾಂಗ್ರೆಸ್ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದೆ. ನಮ್ಮ ಆಡಳಿತದ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ, ಕೆರೆ ಒತ್ತುವರೆ ಬಗ್ಗೆ ಸರ್ವೆ ಮಾಡಲಾಗಿತ್ತು. ಆ ಸರ್ವೆ ಬಳಿಕ ಒತ್ತುವರೆ ತೆರವಿಗೆ ನಿರ್ಧರಿಸಿದ್ದಾಗಲೇ ಸರ್ಕಾರ ಬಿದ್ದು ಹೋಯಿತು. ಈಗ ಬಿಜೆಪಿ ಸರ್ಕಾರ ( BJP Government ) ಆಡಳಿತ ಮಾಡುತ್ತಿದೆ. ಅದನ್ನು ಮಾಡಬೇಕಿತ್ತು. ಅದನ್ನು ಮಾಡದೇ ಇದ್ದಕ್ಕೆ ಬೆಂಗಳೂರಿನಲ್ಲಿ ಮಳೆ ( Bengaluru Rain ) ಅವಾಂತರದಿಂದ ತೊಂದರೆ ಉಂಟಾಗಿದೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾನು ನಿನ್ನೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಅನೇಕ ಬಡಾವಣೆಗಳಲ್ಲಿ ಜನ ಕಷ್ಟಕ್ಕೊಳಗಾಗಿದ್ದಾರೆ. ನಾನು, ರಾಮಲಿಂಗಾರೆಡ್ಡಿ ಇಬ್ಬರೂ ನೋಡಿದ್ದೇವೆ. ಅನೇಕ ಕಡೆ ನೀರು ಮನೆಗಳಿಗೆ ನುಗ್ಗಿದೆ. ಕೆಲವು ಪ್ರದೇಶಗಳಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಸೋಮವಾರ, ಮಂಗಳವಾರ ಹೆಚ್ಚು ಮಳೆಯಾಗಿದೆ. 10-12 ಅಡಿ ನೀರು ರಸ್ತೆಗಳಲ್ಲಿ ತುಂಬಿದೆ. ನಾನು ಬೋಟ್ ನಲ್ಲಿ ತೆರಳಿದ್ದೆ. ಬೆಂಗಳೂರಿನಲ್ಲಿ ಇಂತಹ ಪರಿಸ್ಥಿತಿ ನೋಡಿಲ್ಲ. ದೋಣಿಯಲ್ಲಿ ಹೋಗುವ ಪರಿಸ್ಥಿತಿ ನೋಡಿಲ್ಲ. ಇತಿಹಾಸದಲ್ಲಿಯೇ ನಾನು ನೋಡಿಲ್ಲ ಎಂದರು.
ಸಿಎಂ ಬೊಮ್ಮಾಯಿ ಹಿಂದಿನ ಸರ್ಕಾರ ಕಾರಣ ಅಂದಿದ್ದಾರೆ. ಆ ಸೂರ್ಯನೂ ಅದೇ ರೀತಿ ಹೇಳಿದ್ದಾನೆ. ನಾವು ಅದಕ್ಕೆ ಹೇಗೆ ಕಾರಣ ಆಗುತ್ತೇವೆ. ಕಳೆದ 2006 ರಿಂದ 2022 ರವರೆಗೆ ಸರ್ಕಾರಗಳು ಆಡಳಿತ ನಡೆಸಿವೆ. ಇದರಲ್ಲಿ 16 ವರ್ಷ ಬಿಜೆಪಿಯೇ ಅಧಿಕಾರದಲ್ಲಿದೆ. ಪ್ರವಾಹಕ್ಕೆ ಕಾರಣ ಕೆರೆಗಳಿಗೆ ಸಂಪರ್ಕಗಳೇ ಇಲ್ಲ. ರಾಜಕಾಲುವೆಗಳ ಒತ್ತುವರಿ ತೆರವು ಮಾಡಿಲ್ಲ. ಕಾಲುವೆಗಳ ಹೂಳು ತೆಗೆದಿಲ್ಲ. ಹೀಗಾಗಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಹೇಳಿದರು.
ನಾನು ಸಿಎಂ ಆಗಿದ್ದಾಗ ಸರ್ವೆ ಮಾಡಿಸಿದ್ದೆ. ಎಷ್ಟು ಒತ್ತುವರಿಯಾಗಿದೆ ಎಂದು ಗುರುತಿಸಿದ್ದೆವು. 1953 ಒತ್ತುವರಿ ಪ್ರದೇಶಗಳಿದ್ದವು. ಅದರಲ್ಲಿ 1300 ಒತ್ತುವರಿ ತೆರವು ಮಾಡಿದ್ದೆವು. 653 ಒತ್ತುವರಿ ತೆರವು ಮಾಡಬೇಕಿತ್ತು. ಅಷ್ಟರೊಳಗೆ ನಮ್ಮ ಸರ್ಕಾರ ಹೋಯ್ತು. ಈಗ ಬಿಜೆಪಿ ಸರ್ಕಾರ ಇದೆ. ಯಾಕೆ ಇನ್ನೂ ತೆರವು ಮಾಡಿಲ್ಲ.? ಕೆರೆಗಳ ಹೂಳು ಎತ್ತಿಸಿಲ್ಲ, ಕಾಲುವೆ ಹೂಳು ತೆಗೆದಿಲ್ಲ. ಹಾಗಾಗಿ ಇಷ್ಟೆಲ್ಲಾ ಸಮಸ್ಯೆಯಾಗಿದೆ ಎಂಬುದಾಗಿ ಕಿಡಿಕಾರಿದರು.
BIGG NEWS : ಕೋವಿಡ್ ನಿಂದ ಮೃತರಾದವರ ಸಮಾಧಿಗಳ ಮೇಲೆ `ಬಿಜೆಪ ಭ್ರಷ್ಟೋತ್ಸವ’ ನಡೆಸಲು ಮುಂದಾಗಿದೆ : ಕಾಂಗ್ರೆಸ್ ಟೀಕೆ
ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್ ಪುರಂನಲ್ಲಿ ಯಾರಿದ್ದಾರೆ. ಬಿಜೆಪಿ ಶಾಸಕರು ಅಲ್ಲಿ ಎಷ್ಟು ವರ್ಷಗಳಿಂದ ಇದ್ದಾರೆ. ಭೈರತಿ ಬಸವರಾಜ್, ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಮೂರು ಜನ ಶಾಸಕರು ಇದ್ದಾರೆ. ಇವರ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ಕಡೆ ಬೆರಳು ತೋರಿಸುತ್ತಾರೆ. ಇವತ್ತಿನವರೆಗೂ ಆಕ್ಷನ್ ಪ್ಲಾನ್ ಆಗಿಲ್ಲ. ಕಾಮಗಾರಿಗಳಿಗೆ ಹಣ ನೀಡಿಲ್ಲ ಎಂಬುದಾಗಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.
ಮೂರು ಜನ ಬಿಜೆಪಿ ಎಂಪಿಗಳಿದ್ದಾರೆ. ಹೆಚ್ಚು ಜನ ಶಾಸಕರುಗಳು ಅವರದೇ ಪಕ್ಷದವರು ಇದ್ದಾರೆ. ಬಿಜೆಪಿಯಯವರೇ 100 ಜನ ಕಾರ್ಪೋರೇಟರ್ ಇದ್ದಾರೆ. ಇಷ್ಟೆಲ್ಲಾ ಇದ್ದೂ ಯಾಕೆ ಕ್ರಮ ಜರುಗಿಸಿಲ್ಲ. 148 ಮಿಲಿಮೀಟರ್ ಮಳೆಯಾಗಿದೆ. ಇಷ್ಟು ಪ್ರಮಾಣದ ಮಳೆ ಯಾವ ಕಾಲದಲ್ಲೂ ಆಗಿರಲಿಲ್ಲ. ಒತ್ತುವರಿ ತೆರವು ಮಾಡಿದಿದ್ರೆ ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ವಾಹನಗಳು ನೀರಿನಲ್ಲಿ ಮುಳುಗಿವೆ. 23 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಇವತ್ತಿನವರೆಗೆ ಆ ಹುಡುಗಿಗೆ ಪರಿಹಾರ ಕೊಟ್ಟಿಲ್ಲ ಎಂದರು.
ಸರ್ಕಾರದ ಬೇಜವಾಬ್ದಾರಿಯಿಂದ ಇಷ್ಟೆಲ್ಲಾ ಆಗಿದೆ. ಬಹಳ ಜನ ಹೊಟೇಲ್ ಗಳಲ್ಲಿ ಉಳಿದುಕೊಂಡಿದ್ದಾರೆ. ಕೆಲವರಿಗೆ ಆಹಾರವೇ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಗೆ ಬಿಜೆಪಿಯವರೇ ನೇರ ಕಾರಣ. ಅದಕ್ಕೆ ಶ್ವೇತ ಪತ್ರ ಹೊರಡಿಸಲಿ. ವಿಧಾನಸಭೆಯಲ್ಲೂ ಇದನ್ನ ಪ್ರಸ್ತಾಪಿಸುತ್ತೇನೆ. ಸದನದೊಳಗೆ ಹಾಗೂ ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂಬುದಾಗಿ ಘೋಷಿಸಿದರು.