ಬೆಂಗಳೂರು : ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ತಂದೆ-ಮಗಳು ಮನೆಗೆ ತೆರಳುವಾಗ ದ್ವಿಚಕ್ರ ವಾಹನಕ್ಕೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾದ ಪರಿಣಾಮ ತೆಂದೆ ಮೃತಪಟ್ಟು, ಮಗಳು ಗಾಯಗೊಂ ಡಿರುವ ದಾರುಣ ಘಟನೆ ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆಯ 5ನೇ ಕ್ರಾಸ್ ನಿವಾಸಿ ನಾರಾಯಣ್ (37) ಮೃತ ದುರ್ದೈವಿ. ಇವರ ಪುತ್ರಿ ತ್ರಿಷಾಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಸುಮಾರು 2.15ಕ್ಕೆ ಟೌನ್ ಹಾಲ್ ಜಂಕ್ಷನ್ನಲ್ಲಿ ಈ ಅಪಘಾತ ಸಂಭವಿಸಿದೆ.
ಘಟನೆ ಸಂಬಂಧ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಚಾಲಕ ನವೀನ್ ಕುಮಾರ್ ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಬಸ್: ಶಾಂತಿನಗರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ನಾರಾಯಣ್ ಮತ್ತು ತ್ರಿಷಾ ದ್ವಿಚಕ್ರ ವಾಹನದಲ್ಲಿ ಮಾಗಡಿ ರಸ್ತೆಯಲ್ಲಿರುವ ಮನೆ ಕಡೆಗೆ ಬರುತ್ತಿದ್ದರು.
ಜೆ.ಸಿ.ರಸ್ತೆಯಲ್ಲಿ ಬಂದು ಟೌನ್ ಹಾಲ್ ಜಂಕ್ಷನ್ ಕಡೆಯಿಂದ ಸಿ.ಟಿ.ಮಾರ್ಕೆಟ್ ಕಡೆಗೆ ತೆರಳು ವಾಗ ಹಿಂದಿನಿಂದ ವೇಗವಾಗಿ ಬಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ನಾರಾಯಣ್ ಬಲಭಾಗಕ್ಕೆ ಬಿದ್ದಿದ್ದಾರೆ.