ನವದೆಹಲಿ: ಕಳೆದ ಹಣಕಾಸು ತ್ರೈಮಾಸಿಕದಲ್ಲಿ 18,550 ಯುನಿಟ್ ಗಳ ಮಾರಾಟದೊಂದಿಗೆ ಬೆಂಗಳೂರು ಪ್ರಮುಖ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಜೆಎಲ್ ಎಲ್ ರಿಸರ್ಚ್ ನ ರಿಯಲ್ ಎಸ್ಟೇಟ್ ಇಂಟೆಲಿಜೆನ್ಸ್ ಸರ್ವಿಸ್ (ಆರ್ ಇಐಎಸ್) ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ 16,537 ಯುನಿಟ್ ಗಳೊಂದಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಸುಮಾರು 45 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯು ಗಮನಸೆಳೆದಿದೆ.
ಅಭಿವೃದ್ಧಿ ಹೊಂದುತ್ತಿರುವ ಐಟಿ ವಲಯ, ಮೂಲಸೌಕರ್ಯ ಉನ್ನತೀಕರಣ ಕಾರ್ಯಕ್ರಮಗಳು ಮತ್ತು ಅನುಕೂಲಕರ ವ್ಯಾಪಾರ ವಾತಾವರಣದ ಬೆಂಬಲದೊಂದಿಗೆ ಬೆಂಗಳೂರಿನಲ್ಲಿ ಆಸ್ತಿಗೆ ನಿರಂತರ ಬೇಡಿಕೆಯು ಹಲವಾರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಡೆವಲಪರ್ ಗಳನ್ನು ನಗರಕ್ಕೆ ಆಕರ್ಷಿಸುತ್ತಿದೆ, ಇದರ ಪರಿಣಾಮವಾಗಿ ಪ್ರತಿ ತ್ರೈಮಾಸಿಕದಲ್ಲಿ ಆರೋಗ್ಯಕರ ಮಾರಾಟ ನಡೆಯುತ್ತಿವೆ ಎಂದು ಜೆಎಲ್ ಎಲ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ನಿರ್ದೇಶಕ (ಕರ್ನಾಟಕ ಮತ್ತು ಕೇರಳ) ರಾಹುಲ್ ಅರೋರಾ ಹೇಳಿದರು.
ಬೆಂಗಳೂರಿನಲ್ಲಿ ವೈಟ್ಫೀಲ್ಡ್ ಶೇ.47ರಷ್ಟು ಕೊಡುಗೆ ನೀಡಿದ್ದು, ಹೊಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ನಂತರದ ಸ್ಥಾನಗಳಲ್ಲಿವೆ.
ಕಳೆದ ಹಣಕಾಸು ತ್ರೈಮಾಸಿಕದಲ್ಲಿ ಮೇಲ್ಮಧ್ಯಮ ವರ್ಗದ ಅಪಾರ್ಟ್ಮೆಂಟ್ಗಳು (1 ಕೋಟಿಯಿಂದ 3 ಕೋಟಿ ರೂ.ಗಳ ನಡುವಿನ ಬೆಲೆ) ಶೇಕಡಾ 62 ರಷ್ಟು ಪಾಲನ್ನು ಹೊಂದಿದ್ದವು.
ವೈಟ್ಫೀಲ್ಡ್ ತನ್ನ ಕಚೇರಿ ವಲಯದ ವಿಸ್ತರಣೆ ಮತ್ತು ನಮ್ಮ ಮೆಟ್ರೋದ ಇತ್ತೀಚಿನ ವಿಸ್ತರಣೆಯಿಂದ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಬೂದಿಗೆರೆ ಕ್ರಾಸ್ ಮೂಲಕ ವೈಟ್ ಫೀಲ್ಡ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಜನರನ್ನು ಆಕರ್ಷಿಸಿದೆ.