ಬೆಂಗಳೂರು: ನಗರದ ರೋಹನ್ ಮಾದೇಶ್(ಸೀನಿಯರ್ ಮ್ಯಾಕ್ಸ್), ಅಭಯ್ ಎಂ(ಜೂನಿಯರ್ ಮ್ಯಾಕ್ಸ್) ಹಾಗೂ ನಿಖಿಲೇಶ್ ರಾಜು ಡಿ (ಮೈಕ್ರೋ ಮ್ಯಾಕ್ಸ್) ಕಳೆದ ವಾರಾಂತ್ಯದಲ್ಲಿ ಇಲ್ಲಿ ನಡೆದ 2022ರ ಮೀಕೋ-ಎಫ್ಎಂಎಸ್ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ಶಿಪ್(ರೋಟಾಕ್ಸ್ ಮ್ಯಾಕ್ಸ್ ವಿಭಾಗಗಳು)ನಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.
ಈ ಮೂವರು ಬೆಂಗಳೂರು ಹುಡುಗರು ನವೆಂಬರ್ 19ರಿಂದ 26ರ ವರೆಗೂ ಪೋರ್ಚುಗಲ್ನಲ್ಲಿ ನಡೆಯಲಿರುವ ರೋಟಾಕ್ಸ್ ಮ್ಯಾಕ್ಸ್ ಚಾಲೆಂಜ್ ಗ್ರ್ಯಾಂಡ್ ಫೈನಲ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಎರಡು ತಿಂಗಳ ಕಾಲ ನಡೆದ ಐದು ಸುತ್ತುಗಳ ರೋಚಕ ಸ್ಪರ್ಧೆಯಲ್ಲಿ ಪೆರೆಗ್ರೈನ್ ರೇಸಿಂಗ್ ತಂಡದ ರೋಹನ್ ಮಾದೇಶ್ ಅತ್ಯುತ್ತಮ ಪ್ರದರ್ಶನ ತೋರಿದರು. ಬರೋಬ್ಬರಿ 8 ರೇಸ್ಗಳನ್ನು ಗೆದ್ದ ಅವರು 442 ಅಂಕಗಳನ್ನು ಕಲೆಹಾಕಿದರು. ಕೊನೆಯ ಎರಡು ಸುತ್ತುಗಳಲ್ಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಿಗೆ ತೃಪ್ತಿಪಟ್ಟ ಅವರು ದೊಡ್ಡ ಅಂತರದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
‘ಶಿವಮೊಗ್ಗ ಸ್ಮಾರ್ಟ್ಸಿಟಿ’ ಸಂಬಂಧಿಸಿದ ದೂರು ದಾಖಲಿಸಲು ‘ಸಹಾಯವಾಣಿ’ ಆರಂಭ
ರಾಯೊ ರೇಸಿಂಗ್ನ ಆದಿತ್ಯ ಪಟ್ನಾಯಕ್(394 ಅಂಕ) ಹಾಗೂ ಬೈರೆಲ್ ಆರ್ಟ್ ಇಂಡಿಯಾದ ರಿಶೋನ್ ರಾಜೀವ್(386 ಅಂಕ) ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳನ್ನು ಪಡೆದರು. ಸೀನಿಯರ್ ಮ್ಯಾಕ್ಸ್ ವಿಭಾಗದಲ್ಲಿ ದೇಶದ 32 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಒಟ್ಟಾರೆ ಮೂರೂ ವಿಭಾಗಗಳಲ್ಲಿ 69 ಸ್ಪರ್ಧಿಗಳು ಭಾಗವಹಿಸಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಸ್ಪರ್ಧಿಗಳನ್ನು ಕಂಡ ಚಾಂಪಿಯನ್ಶಿಪ್ ಎನಿಸಿಕೊಂಡಿತು.
ಜೂನಿಯರ್ ಮ್ಯಾಕ್ಸ್ ಹಾಗೂ ಮೈಕ್ರೋ ಮ್ಯಾಕ್ಸ್ ವಿಭಾಗಗಳಲ್ಲೂ ತೀವ್ರ ಸ್ಪರ್ಧೆ ಕಂಡು ಬಂತು. ಅಭಯ್ ಎಂ(ಬೈರೆಲ್ ಆರ್ಟ್ ಇಂಡಿಯಾ) ಹಾಗೂ ಅನ್ಶುಲ್ ಶಿವಕುಮಾರ್(ಎಂಸ್ಪೋರ್ಟ್) ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಕೇವಲ 8 ಅಂಕ ಮುನ್ನಡೆಯೊಂದಿಗೆ ಅಂತಿಮ ರೇಸ್ಗೆ ಕಾಲಿಟ್ಟ ಅಭಯ್, 9ನೇ ಸ್ಥಾನಕ್ಕೆ ಕುಸಿದರು. ಆದರೆ ಅನ್ಶುಲ್ 2ನೇ ಸ್ಥಾನ ಪಡೆದ ಕಾರಣ ಪ್ರಶಸ್ತಿ ಅವರ ಕೈತಪ್ಪಿತು.
ಅತಿಹೆಚ್ಚು ರೇಸ್ಗಳನ್ನು ಗೆದ್ದ ಕಾರಣ ಅಭಯ್ ಎಂ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಇಶಾನ್ ಮಾದೇಶ್ 3ನೇ ಸ್ಥಾನ ಪಡೆದರು.
ಮೈಕ್ರೋ ಮ್ಯಾಕ್ಸ್ ವಿಭಾಗದಲ್ಲಿ ಕೊನೆ ಕ್ಷಣದ ವರೆಗೂ ಪ್ರಶಸ್ತಿಗೆ ಪೈಪೋಟಿ ನಡೆಯಿತು. ಇಶಾಂತ್ ವೆಂಕಟೇಶನ್(377) ಬೆಂಗಳೂರಿನ ನಿಖಿಲೇಶ್ ರಾಜು(373) ಅವರಿಗಿಂತ ಕೇವಲ 4 ಅಂಕಗಳಿಂದ ಮುಂದಿದ್ದರು. ಆದರೆ ಫೈನಲ್ ರೇಸ್ನಲ್ಲಿ ನಿಖಿಲೇಶ್ ಮೊದಲ ಸ್ಥಾನ ಪಡೆದರೆ, ಇಶಾಂತ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟು ಪ್ರಶಸ್ತಿಯನ್ನು ಕೈಚೆಲ್ಲಿದರು.
ಫಲಿತಾಂಶಗಳು
ಸೀನಿಯರ್ ಮ್ಯಾಕ್ಸ್
1.ರೋಹನ್ ಮಾದೇಶ್(442); 2.ಆದಿತ್ಯ ಪಟ್ನಾಯಕ್(394); 3.ರಿಶೋನ್ ರಾಜೀವ್(386)
ಜೂನಿಯರ್ ಮ್ಯಾಕ್ಸ್
1.ಅಭಯ್ ಎಂ(395); 2.ಅನ್ಶುಲ್ ಶಿವಕುಮಾರ್(395); 3.ಇಶಾನ್ ಮಾದೇಶ್(389)
ಮೈಕ್ರೋ ಮ್ಯಾಕ್ಸ್
1.ನಿಖಿಲೇಶ್ ರಾಜು ಡಿ(428); 2.ಇಶಾಂತ್ ವೆಂಕಟೇಶನ್(424); 3.ಅನುಜ್ ಅರುಣ್(400)