ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿ, ಮ್ಯಾಜಿಕ್ ನಂಬರ್ ದಾಟಿ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಂಗಾಳದ ಈ ಗೆಲುವನ್ನು “ಐತಿಹಾಸಿಕ” ಎಂದು ಬಣ್ಣಿಸಿರುವ ಅವರು, ಇದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಫಲಿತಾಂಶ ಎಂದು ಹೇಳಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದೆ! 2026ರ ಈ ವಿಧಾನಸಭಾ ಚುನಾವಣೆಯು ಎಂದೆಂದಿಗೂ ಸ್ಮರಣೀಯ. ಜನರ ಶಕ್ತಿ ಗೆದ್ದಿದೆ ಮತ್ತು ಬಿಜೆಪಿಯ ಸುಶಾಸನದ ರಾಜಕಾರಣಕ್ಕೆ ಜಯ ಸಿಕ್ಕಿದೆ” ಎಂದು ಮೋದಿ ಬರೆದುಕೊಂಡಿದ್ದಾರೆ.
“ಬಂಗಾಳದ ಪ್ರತಿಯೊಬ್ಬ ನಾಗರಿಕನಿಗೂ ನಾನು ಶಿರಬಾಗಿ ನಮಿಸುತ್ತೇನೆ. ನಮಗೆ ಭರ್ಜರಿ ಜನಾದೇಶ ನೀಡಿದ ಜನತೆಯ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದ್ದಾರೆ.
ದಶಕಗಳಿಂದ ನೆಲಮಟ್ಟದಲ್ಲಿ ಹೋರಾಡಿದ ಮತ್ತು ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಪಕ್ಷವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಕಾರ್ಯಕರ್ತರ ಶ್ರಮವಿಲ್ಲದೆ ಈ ಸಾಧನೆ ಸಾಧ್ಯವಿರಲಿಲ್ಲ ಎಂದು ಮೋದಿ ಕಾರ್ಯಕರ್ತರಿಗೆ ಸಲಾಂ ಎಂದಿದ್ದಾರೆ.








