ಬೆಳಗಾವಿ: ಜಿಲ್ಲೆಯ ಜನರೇ ಬೆಚ್ಚಿ ಬೀಳುವಂತೆ ನಿನ್ನೆಯ ತಡರಾತ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರೊಬ್ಬರ ಮನೆಯ ಬಾಗಿಲು ಹೊಡೆದು ಒಳ ನುಗ್ಗಿರುವಂಕ ದುಷ್ಕರ್ಮಿಗಳು, ಅಧ್ಯಕ್ಷ, ಪತ್ನಿ ಹಾಗೂ ಸೊಸೆಯನ್ನು ಕೈಕಾಲು ಕಟ್ಟಿ ಹಾಕಿ, ಮನೆಯಲ್ಲಿಟ್ಟಿದ್ದಂತ ಲಕ್ಷಾಂತರ ರೂ ಹಣವನ್ನು ದೋಚಿ ಪರಾರಿಯಾಗಿರೋ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ್ ರಜಪೂತ ಮನೆಗೆ ಕಳೆದ ತಡರಾತ್ರಿ ಮನೆಗೆ 8 ಜನ ದುಷ್ಕರ್ಮಿಗಳು ಬಾಗಿಲು ಹೊಡೆದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದಂತ ಚಂದ್ರಶೇಖರ್ ರಜಪೂತ, ಪತ್ನಿ ಹಾಗೂ ಸೊಸೆಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ.
ಈ ಬಳಿಕ ಮನೆಯಲ್ಲಿದ್ದಂತ 23 ಲಕ್ಷ ನಗದು, 120 ಗ್ರಾಂ ಚಿನ್ನವನ್ನು ದರೋಡೆ ಮಾಡಿಕೊಂಡು ಮನೆಯಿಂದ ಕಾಲ್ ಕಿತ್ತಿದ್ದಾರೆ. ಚಂದ್ರಶೇಖರ್ ಹಾಗೂ ಪತ್ನಿ, ಸೊಸೆ ಕೂಗಿಕೊಂಡಿದ್ದರಿಂದಾಗಿ ಜನರು ವಿಷಯ ತಿಳಿದು ಆಗಮಿಸಿ ನೋಡಿದಾಗ ಕಳ್ಳರು ಮನೆಗೆ ನುಗ್ಗಿ ದರೋಡೆ ಮಾಡಿರುವಂತ ವಿಷಯ ತಿಳಿದು ಬಂದಿದೆ.
ಅಂದಹಾಗೇ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ್ ಅವರ ಮಗ ಪಿಡಿಓ ಆಗಿದ್ದರು. ಕೆಲ ತಿಂಗಳ ಹಿಂದಷ್ಟೇ ಅಕಾಲಿಕ ಮರಣ ಹೊಂದಿದ್ದರು. ಮಗನ ಸಾವಿನ ನಂತ್ರ ವಿಮೆ ಹಣವನ್ನು ತೆಗೆದುಕೊಂಡಿದ್ದಂತ ಚಂದ್ರಶೇಖರ್ ಮನೆಯಲ್ಲಿಟ್ಟಿದ್ದರು. ಈ ವಿಷಯ ತಿಳಿದಿದ್ದಂತವರೇ ದರೋಡೆ ಮಾಡಿರೋದಾಗಿ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.