ಮಂಡ್ಯ: ಮನೆಯ ಮಾಲೀಕರು ಮತ್ತೊಂದೆಡೆ ಇದ್ದು, ಮನೆ ಬೇರೊಂದು ಕಡೆಯಿದ್ದು, ಯಾರ್ ಯಾರಿಗೋ ಬಾಡಿಗೆಯನ್ನು ನೀಡೋದು ಸಹಜವೇ. ಆದ್ರೇ.. ಕೆಲವೊಮ್ಮೆ ನೀವು ಎಲ್ಲೋ ಇದ್ದು, ಮನೆ ಬಾಡಿಗೆಗೆ ಯಾರ್ ಯಾರಿಗೋ ಕೊಟ್ಟಾಗ ಏನ್ ಆಗಲಿದೆ ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ. ಅಲ್ಲದೇ ಮಾಲೀಕರಾದಂತ ನೀವು, ನಿಮ್ಮ ಮನೆಯ ಬಗ್ಗೆ ಆಗಾಗ ಗಮನಿಸೋ ಎಚ್ಚರಿಕೆಯನ್ನು ವಹಿಸೋದು ಮರೆಯಬೇಡಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೋಟೆಬೀದಿಯ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದವರು ಮನೆಯಲ್ಲಿ ಹತ್ತಾರು ಲಾಂಗು, ಮಾದಕ ವಸ್ತುಗಳ ಸೇವನೆ ಸೇರಿದಂತೆ ಮನೆಯೊಳಗೆ ಸುರಂಗ ಕೊರೆದಿರುವುದನ್ನು ಕಂಡ ಮಾಲೀಕ ಭಯಭೀತರಾಗಿ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರುನೀಡಿದ್ದು, ಬಡಾವಣೆ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಘಟನೆ ವಿವರ ; ಮನೆಯ ಮಾಲೀಕ ಪವಿತ್ರ ರಾಜು ಬೆಂಗಳೂರಿನಲ್ಲಿ ವಾಸವಿದ್ದು, ಇತ್ತೀಚೆಗೆ ಪಟ್ಟಣಕ್ಕೆ ಬಂದು ನೆಲೆಸಿದ್ದರು. ಇವರ ಕುಂಟುಂಬದವರು ಪಟ್ಟಣದ ಮೈಸೂರು ಮುಖ್ಯರಸ್ತೆಯ ಕಾರ್ಖಾನೆ ಸ್ಕೂಲ್ ಎದುರಿನ ಕೋಟೆ ಬೀದಿಯಲ್ಲಿ ಭಾಗಾಂಶವಾಗಿ ಪಾಲಿಗೆ ಹಳೆಯ ಮನೆಯನ್ನು ಕೊಡಲಾಗಿತ್ತು. ಈ ಮನೆಯನ್ನು ಈದ್ಗಾ ಮೊಹಲ್ಲಾದ ನಿವಾಸಿ ತಸ್ಲೀಮ್ ಎಂಬ ಮುಸ್ಲಿಂ ಮಹಿಳೆ ತನ್ನ ಐದು ಜನ ಪುತ್ರರೊಡನೆ ಬಾಡಿಗೆಗೆ ಪಡೆದು ವಾಸವಿದ್ದರು. ಮನೆ ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಮನೆ ಖಾಲಿಮಾಡುವಂತೆ ಬಾಡಿಗೆ ದಾರರಿಗೆ ಎರಡು ತಿಂಗಳಿನಿಂದ ಮಾಲೀಕ ಕೇಳಿಕೊಂಡಿದ್ದಾರೆ. ಈ ಬಗ್ಗೆ ಕಿವಿಗೊಡದಿದ್ದಾಗ ಇತ್ತೀಚೆಗೆ ಸುರಿದ ಮಳೆಯಿಂದ ಮನೆಯ ಹಿಂಭಾದಲ್ಲಿದ್ದ ಕೋಣೆಗಳ ಗೋಡೆ ಕುಸಿದಿದ್ದರಿಂದ ಪರಿಶೀಲನೆಗೆಂದು ಭಾನುವಾರ ಮಾಲೀಕ ಪವಿತ್ರರಾಜು ಒಳ ಹೋದಾಗ ಅಲ್ಲಿನ ಚಿತ್ರಣವನ್ನು ನೋಡಿ ಗಾಭರಿಗೊಳಗಾದರು.
ಮನೆಯ ಹಿರಿಯರು ಸ್ನಾನಕ್ಕೆಂದು ಕಟ್ಟಿದ್ದ ಬಚ್ಚಲು ತೊಟ್ಟಿಯನ್ನು ಸುಮಾರು 12 ಅಡಿ ಆಳವಾಗಿ ಸುರಂಗದ ರೀತಿಯಲ್ಲಿ ಊಟದ ತಟ್ಟೆ ಹಾಗೂ ಪ್ಲಾಸ್ಟಿಕ್ ಬಕೇಟ್ ಬಳಸಿ ತೋಡಲಾಗಿತ್ತು. ಸಾವರಿಕೊಂಡು ಸೂಕ್ಷ್ಮವಾಗಿ ಗಮನಿಸಿದಾಗ ಅಟ್ಟದಲ್ಲಿ ಆರು ಪಳಪಳಿಸುವ ಲಾಂಗುಗಳು ಪತ್ತೆಯಾದವು. ಮತ್ತೊಂದು ಕೋಣೆಯಲ್ಲಿ ಮಲಗಲು ಚಾಪೆ ಹಾಕಲಾಗಿದ್ದು, ಅದರ ಪಕ್ಕದಲ್ಲೇ ಭಂಗಿಸೊಪ್ಪು ಸೇವನೆಯಿಂದ ಸುಟ್ಟು ಕರಕಲಾಗಿದ್ದ ಒಂದುಗುಡ್ಡೆ ಬೂದಿ, ನೂರಾರು ಸೇದಿ ಬಿಸಾಡಲಾಗಿದ್ದ ಸಿಗರೇಟ್, ಬೀಡಿ ತುಂಡುಗಳು. ಪಂಚರ್ ಶಾಪ್ಗಳಲ್ಲಿ ಬಳಸಲಾಗುವು ಸಲ್ಯೂಷನ್ ಪಾಕೇಟ್ ಕತ್ತರಿಸಿ ಬಟ್ಟೆಯ ತುಂಡಿನಲ್ಲಿ ಹಾಕಿ ಸೇವನೆಮಾಡಿ ಬಿಟ್ಟಿರುವುದು ಕಂಡುಬಂದಿತು. ಇದನ್ನು ನೋಡಿ ಆತಂಕಗೊಂಡ ಮಾಲೀಕ ಅಲ್ಲಿದ್ದ ಲಾಂಗುಗಳನ್ನು ತೆಗೆದುಕೊಂಡು ಮನೆಯ ಮುಂಭಾಗದ ಪಡಸಾಲೆಯ ಮೇಲೆ ಹಾಕಿದ್ದಾರೆ.
ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿ ವಾಪಸ್ ಬರುವಷ್ಟರಲ್ಲಿ ಪಡಸಾಲೆಯಲ್ಲಿಟ್ಟಿದ್ದ ಲಾಂಗುಗಳನ್ನು ಬೈಕೊಂದರಲ್ಲಿ ಬಂದ ಬಾಡಿಗೆದಾರಳ ಪುತ್ರರು ತೆಗೆದುಕೊಂಡು ಪರಾರಿಯಾದುದ್ದನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮನೆಯೊಳಗೆ ಮತ್ತೊಂದು ಲಾಂಗ್ ದೊರೆತಿದ್ದು, ವಶಕ್ಕೆ ಪಡೆದು ಸಂಜೆಯಾಗಿದ್ದರಿಂದ ಬೆಳಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಸಲಹೆ ನೀಡಿ ತೆರಳಿದ್ದರು ಎನ್ನಲಾಗಿದೆ. ಸೋಮವಾರ ಬೆಳಗಾಗುತ್ತಿದ್ದಂತೆ ಮಾಹಿತಿ ತಿಳಿದ ಅಕ್ಕಪಕ್ಕದ ನಿವಾಸಿಗಳು ಮನೆಯೊಳಗಿನ ದೃಷ್ಯಗಳನ್ನು ನೋಡಿ ಪಟ್ಟಣದ ಹೃದಯಭಾಗದಲ್ಲೇ ಇಂತಹ ಆಗಂತುಕ ಶಕ್ತಿಗಳು ವಾಸವಿದ್ದರೆಂಬ ವಿಷಯ ತಿಳಿದು ಆತಂಕಕೊಳಗಾಗಿದ್ದಾರೆ. ಪೊಲೀಸರ ತನಿಖೆಯಿಂದ ಪ್ರಕರಣ ಬೆಳಕಿಗೆ ಬರಬೇಕಿದ್ದು, ಸೂಕ್ಷ್ಮವಾಗಿ ಪರಿಗಣಿಸಿ ತನಿಖೆ ನಡೆಸುವ ಮೂಲಕ ಸಮಾಜ ಘಾತುಕ ಶಕ್ತಿಗಳನ್ನು ಎಡೆಮುಡಿಕಟ್ಟ ಬೇಕೆಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ