ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಕಣದಲ್ಲಿ ಕ್ರಿಕೆಟ್ ಅಬ್ಬರದ ಜೊತೆಜೊತೆಗೆ ವಿವಾದಗಳೂ ಸದ್ದು ಮಾಡುತ್ತಿವೆ. ಆಟಗಾರರ ಶಿಸ್ತು ಉಲ್ಲಂಘನೆ ಮತ್ತು ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಎಲ್ಲಾ 10 ಫ್ರಾಂಚೈಸಿಗಳಿಗೆ 8 ಪುಟಗಳ ಕಠಿಣ ಮಾರ್ಗಸೂಚಿಯನ್ನು ರವಾನಿಸಿದ್ದಾರೆ.
ಇನ್ಮುಂದೆ ಆಟಗಾರರ ಹೋಟೆಲ್ ರೂಮ್‌ಗಳಿಗೆ ಹೊರಗಿನವರು ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ಭೇಟಿ ಮಾಡಬೇಕಿದ್ದರೆ ಹೋಟೆಲ್ ಲಾಬಿಯಲ್ಲಿ ಮಾತ್ರ ಅವಕಾಶವಿರುತ್ತದೆ. ಇದು ‘ಹನಿ ಟ್ರ್ಯಾಪ್’ನಂತಹ ಅಪಾಯಗಳನ್ನು ತಡೆಯಲು ಕೈಗೊಂಡ ಕ್ರಮವಾಗಿದೆ.
ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡಿದ ವಿವಾದದ ಬೆನ್ನಲ್ಲೇ, ಸ್ಟೇಡಿಯಂ, ಡ್ರೆಸ್ಸಿಂಗ್ ರೂಮ್ ಮತ್ತು ಹೋಟೆಲ್ ಆವರಣದಲ್ಲಿ ಇ-ಸಿಗರೇಟ್ ಅಥವಾ ವೇಪಿಂಗ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪಂದ್ಯ ನಡೆಯುವ ಸಮಯದಲ್ಲಿ ಫ್ರಾಂಚೈಸಿ ಮಾಲೀಕರು ಆಟಗಾರರ ಅಥವಾ ಕೋಚ್‌ಗಳ ಜೊತೆ ಸಂವಹನ ನಡೆಸುವಂತಿಲ್ಲ. ಡಗೌಟ್ ಬಳಿ ಫೋನ್ ಬಳಸುವುದು ಅಥವಾ ಆಟಗಾರರನ್ನು ಭೇಟಿ ಮಾಡುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.
ಆಟಗಾರರು ಪಂದ್ಯದ ದಿನಗಳಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಅನಗತ್ಯವಾಗಿ ವೀಡಿಯೊ ಅಥವಾ ‘ರೀಲ್ಸ್’ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ತಾಂತ್ರಿಕ ಮಾಹಿತಿ ಸೋರಿಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂದು ಪರೀಕ್ಷಿಸಲು ಬಿಸಿಸಿಐ ತಂಡವು ಹೋಟೆಲ್ ಮತ್ತು ಸ್ಟೇಡಿಯಂಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ತಪಾಸಣೆ ನಡೆಸಲಿದೆ.








