ಕೆಎನ್ಎನ್ಸಿನಿಮಾಡೆಸ್ಕ್: ಬನಾರಸ್ ಸಿನಿಮಾ ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಡುಗಳು, ಟ್ರೇಲರ್ ನಿಂದ ಚಿತ್ತ ಕದ್ದಿರುವ ಈ ಸಿನಿಮಾ ಪ್ರಚಾರದ ವೇಳೆಯೂ ಹಲವು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಸಿನಿಮಾದ ಮಹತ್ವದ ಹಂತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಂಡದ ಜೊತೆಯಾಗಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಝೈದ್ ಖಾನ್ ನಡುವೆ ಒಂದೊಳ್ಳೆ ಬಾಂಧವ್ಯ ಇರುವುದಂತು ಸತ್ಯ. ಆಗಾಗ ಇಬ್ಬರು ಜೊತೆಗೆ ಕಾಣಿಸಿಕೊಳ್ಳುತ್ತಾರೆ. ಝೈದ್ ಖಾನ್ ಕೂಡ ಒಂಥರ ದರ್ಶನ್ ಹುಡುಗ ಎಂದರೆ ತಪ್ಪಾಗಿಲಿಕ್ಕಿಲ್ಲ. ತಮ್ಮ ಹುಡುಗರಿಗಾಗಿ (ಸ್ನೇಹಿತರು) ದರ್ಶನ್ ಮನ ಯಾವಾಗಲೂ ತುಡಿಯುತ್ತದೆ. ಇದೇ ಬಾಂಧವ್ಯವೇ ಸಿನಿಮಾದ ಪ್ರಚಾರ ಕಾರ್ಯದಲ್ಲಿ ದರ್ಶನ್ ತೊಡಗುವಂತೆ ಮಾಡಿದೆ.
ನವೆಂಬರ್ 4ಕ್ಕೆ ಬನಾರಸ್ ಸಿನಿಮಾ ದೇಶಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಅಂದರೆ ಇದೇ ತಿಂಗಳ 22ರಂದು ಪ್ರಿರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗಂಡು ಮೆಟ್ಟಿದ ನಾಡಿನಲ್ಲಿ ಕಾರ್ಯಕ್ರಮ ಅದ್ಧೂರಿ ವೇದಿಕೆಯಲ್ಲಿ ನಡೆಯಲಿದೆ. ಸಂಜೆ 7.30ಕ್ಕೆ, ರೈಲ್ವೇ ಸ್ಪೋಟ್ಸ್ ಗ್ರೌಂಡ್ ನಲ್ಲಿ ಪ್ರೋಗ್ರಾಂ ಶುರುವಾಗಲಿದ್ದು, ದರ್ಶನ್ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಅವರ ಜೊತೆಗೆ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ ಇನ್ನು ಹಲವು ಸ್ಟಾರ್ ಗಳು ಅದ್ದೂರಿ ವೇದಿಕೆ ಮೇಲೆ ಇರಲಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದ ಬನಾರಸ್ ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಇನ್ನು ಝೈದ್ ಖಾನ್ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಂಟ್ರಿಯಾಗುತ್ತಿದ್ದಾರೆ. ಸೋನಲ್, ಝೈದ್ ಗೆ ನಾಯಕಿಯಾಗಿದ್ದಾರೆ.