ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಕರಕುಶಲ ವಸ್ತುಗಳು ಹಾಗೂ ವೈವಿಧ್ಯಮಯ ಆಹಾರ ಖಾದ್ಯಗಳನ್ನೊಳಗೊಂಡ ಬಹುನಿರೀಕ್ಷಿತ “ಅವ್ವಸಂತೆ-20” ಮೇಳವು ಮೇ.30ರ ಶನಿವಾರದಂದು ಪಟ್ಟಣದ ಬ್ರಾಸಂ ಸಭಾಂಗಣದಲ್ಲಿ ಆಯೋಜನೆಗೊಂಡಿದೆ ಎಂದು ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ತಿಳಿಸಿದರು.
ಇಂದು ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನ್ಮುಖಿ ಸಂಸ್ಥೆ ಹಾಗೂ ಹೆಗಡೋದಿನ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಮಹಿಳೆಯರ ಸಾರಥ್ಯದಲ್ಲೇ ಈ ವಿಶಿಷ್ಟ ಕರಕುಶಲ ಹಾಗೂ ಆಹಾರ ಮೇಳ ನಡೆಯಲಿದೆ ಎಂದರು.
ಮಹಿಳಾ ಆರ್ಥಿಕ ಸಬಲೀಕರಣಕ್ಕೆ ವೇದಿಕೆ
“ಕಳೆದ ಐದು ವರ್ಷಗಳಿಂದ ಜೀವನ್ಮುಖಿ ಸಂಸ್ಥೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ನಿರಂತರವಾಗಿ ಶ್ರಮಿಸುತ್ತಿದೆ. ‘ಅವ್ವಸಂತೆ’ಯ ಮೂಲಕ ಮಹಿಳಾ ಸ್ವಸಹಾಯ ಸಂಘಟನೆಗಳು ಹಾಗೂ ಕರಕುಶಲಕರ್ಮಿಗಳು ತಯಾರಿಸಿದ ವಿಶಿಷ್ಟ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲಾಗುತ್ತಿದೆ. ಈವರೆಗೆ ಇಂತಹ 19 ಸಂತೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಈ ಬಾರಿ ಹೆಮ್ಮೆಯ 20ನೇ ಅವ್ವಸಂತೆ ನಡೆಯುತ್ತಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಮಹಿಳಾ ಕರಕುಶಲಕರ್ಮಿಗಳು ಹಾಗೂ ಸ್ಥಳೀಯ ಜೀವನ್ಮುಖಿ ಸಂಸ್ಥೆಗಳು ಪಾಲ್ಗೊಳ್ಳಲಿವೆ” ಎಂದು ಮಾಹಿತಿ ನೀಡಿದರು.
ಕೈಮಗ್ಗ ಪ್ರದರ್ಶನ ಮತ್ತು ಆಹಾರ ಮೇಳದ ಸೌಲಭ್ಯ
“ಈ ಬಾರಿಯ ಸಂತೆಯಲ್ಲಿ 13ಕ್ಕೂ ಹೆಚ್ಚು ಪ್ರತ್ಯೇಕ ಕರಕುಶಲ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ವೈವಿಧ್ಯಮಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ‘ಇಕ್ರಾ’ ಸಂಸ್ಥೆಯ ಸಾವಯವ ದಿನಸಿ ಉತ್ಪನ್ನಗಳು ಹಾಗೂ ‘ಚರಕ’ ಸಂಸ್ಥೆಯ ಪ್ರಸಿದ್ಧ ನೈಸರ್ಗಿಕ ಬಣ್ಣದ ಕೈಮಗ್ಗ ಬಟ್ಟೆಗಳು ಮತ್ತು ವಸ್ತುಗಳ ಪ್ರದರ್ಶನ-ಮಾರಾಟ ಇಲ್ಲಿರಲಿದೆ. ಇದರೊಂದಿಗೆ ಗ್ರಾಹಕರ ನಾಲಿಗೆ ರುಚಿ ಹೆಚ್ಚಿಸಲು ವಿಶೇಷ ‘ಆಹಾರ ಮೇಳ’ವನ್ನು ಸಹ ಆಯೋಜಿಸಲಾಗಿದೆ” ಎಂದು ವಿಪ್ರತಿಭಾ ವಿವರಿಸಿದರು.
ಮೇ 30ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂತೆ ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಸಾಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕಾಗಿ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ವಿನುತಾ, ಅರ್ಚನಾ, ಜ್ಯೋತಿ, ಮಮತಾ ಹಾಗೂ ಸರೋಜಮ್ಮ ಉಪಸ್ಥಿತರಿದ್ದರು.
ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ








