ಹೈದರಾಬಾದ್ : ತೆಲಂಗಾಣದ ವಾರ್ಗಲ್ ಮಂಡಲ್ನ ಮೈಲಾರಂ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಆಟೋ ಚಾಲಾಯಿಸಿದ್ದರಿಂದ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ತನ್ನನ್ನು ಸ್ಥಳೀಯರು ಎಲ್ಲಿ ಥಳಿಸುತ್ತಾರೋ ಎಂಬ ಭಯದಿಂದ ಆಟೋ ಚಾಲಕ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ
ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಆಟೋ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಜ್ವೆಲ್ ಎಜುಕೇಶನ್ ಹಬ್ ಬಳಿ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ನಾಲ್ವರು ವಿದ್ಯಾರ್ಥಿಗಳಲ್ಲಿ 9 ವರ್ಷದ ಸಾತ್ವಿಕಾ ಮತ್ತು 8 ವರ್ಷದ ರುತ್ವಿಕಾ ಎಂಬ ಬಾಲಕಿಯರು ತೀವ್ರವಾಗಿ ಗಾಯಗೊಂಡಿದ್ದು, ಇನ್ನಿಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಗೊಂಡ ಮಕ್ಕಳನ್ನು ಕೂಡಲೇ ಸ್ಥಳೀಯರು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನೂ ಸ್ಥಳೀಯರು ಥಳಿಸುತ್ತಾರೆ ಎಂಬ ಭಯದಿಂದ ಆಟೋ ಚಾಲಕ ವಿದ್ಯುತ್ ಕಂಬದ ಮೇಲೆ ಹತ್ತಿ ಅವಾಂತರ ಸೃಷ್ಟಿಸಿದ್ದಾನೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ಆಟೋ ಚಾಲಕ ನರಸಿಮುಲು ಮದ್ಯದ ಅಮಲಿನಲ್ಲಿದ್ದನು. ಸ್ಥಳೀಯರ ಕೋಪದಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಕಂಬ ಏರಿದ್ದನು. ಆದರೆ ಅದೃಷ್ಟವಶಾತ್, ಆ ಸಮಯದಲ್ಲಿ ಕರೆಂಟ್ ಇರಲಿಲ್ಲ. ಹೀಗಾಗಿ ಆಟೋ ಚಾಲಕನ ಮನವೊಲಿಸಿ ಕೊನೆಗೂ ಕೆಳಗಿಳಿಸಲಾಯಿತು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.