ಬೆಂಗಳೂರು: ರಾಜಧಾನಿಯ ವಿದ್ಯಾರ್ಥಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಿಹಿ ಸುದ್ದಿ ನೀಡಿದೆ. ಸರ್ಕಾರದ ನಿರ್ದೇಶನದಂತೆ 2026-27ನೇ ಶೈಕ್ಷಣಿಕ ಸಾಲಿನ 1 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ಬಸ್ ಪಾಸುಗಳ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕುರಿತು ಬಿಎಂಟಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅರ್ಹ ವಿದ್ಯಾರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ.
ಮೇ 30 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ, ಜೂನ್ 1 ರಿಂದ ಪಾಸ್ ವಿತರಣೆ
2026-27ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸಿಗಾಗಿ ದಿನಾಂಕ 30.05.2026 ರಿಂದಲೇ ಆನ್ಲೈನ್ ಮೂಲಕ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ. ಆನ್ಲೈನ್ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ದಿನಾಂಕ 01.06.2026 ರಿಂದ ಬೆಂಗಳೂರು ಒನ್ ಸೇರಿದಂತೆ ಸಂಸ್ಥೆಯ ನಿಗದಿಪಡಿಸಿದ ಪ್ರಮುಖ ಕೇಂದ್ರಗಳ ಮೂಲಕ ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ಸುಲಭ ಅರ್ಜಿ
ವಿದ್ಯಾರ್ಥಿ ರಿಯಾಯಿತಿ ಪಾಸಿನ ಆನ್ಲೈನ್ ಅರ್ಜಿಯು ಸರ್ಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಲಭ್ಯವಿರುತ್ತದೆ. ಆನ್ಲೈನ್ ಬಳಕೆ ಅರಿಯದ ಅಥವಾ ತಾಂತ್ರಿಕ ತೊಂದರೆ ಎದುರಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೇರವಾಗಿ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯನ್ನು ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಪಾಸ್ ವಿತರಣಾ ಕೇಂದ್ರಗಳ ವಿವರ
ವಿದ್ಯಾರ್ಥಿಗಳು ತಮ್ಮ ಪಾಸುಗಳನ್ನು ಪಡೆದುಕೊಳ್ಳಲು ಬೆಂಗಳೂರು ನಗರದಾದ್ಯಂತ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಕೌಂಟರ್ಗಳನ್ನು ತೆರೆಯಲಾಗಿದೆ. ಬೆಂಗಳೂರು ಒನ್ ಕೇಂದ್ರಗಳ ಜೊತೆಗೆ ಬಿಎಂಟಿಸಿಯ ಈ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ಪಾಸುಗಳನ್ನು ವಿತರಿಸಲಾಗುವುದು:
-
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)
-
ಕೆಂಗೇರಿ ಟಿಟಿಎಂಸಿ
-
ಶಾಂತಿನಗರ ಟಿಟಿಎಂಸಿ
-
ಹೊಸಕೋಟೆ ಬಸ್ ನಿಲ್ದಾಣ
-
ಎಲೆಕ್ಟ್ರಾನಿಕ್ ಸಿಟಿ ಘಟಕ-19
-
ಕರಾರಸಾ (KSRTC) ನಿಗಮದ ಆನೇಕಲ್ ಬಸ್ ನಿಲ್ದಾಣ
ವಿದ್ಯಾರ್ಥಿನಿಯರಿಗೆ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ
ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯು ಯಥಾಸ್ಥಿತಿ ಮುಂದುವರಿದಿದ್ದು, ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಬಿಎಂಟಿಸಿಯ ಸಾಮಾನ್ಯ ಸೇವೆಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಲಭ್ಯವಿರಲಿದೆ. ಹಾಗಾಗಿ ರಾಜ್ಯದ ವಿದ್ಯಾರ್ಥಿನಿಯರು ಯಾವುದೇ ಅಡೆತಡೆಯಿಲ್ಲದೆ ಈ ಉಚಿತ ಪ್ರಯಾಣ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ವಿದ್ಯಾರ್ಥಿ ಪಾಸ್ ವಿತರಣೆ ಹಾಗೂ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಸ್ಥೆಯ ಸಹಾಯವಾಣಿ (ಕಾಲ್ ಸೆಂಟರ್) ಸಂಖ್ಯೆ 080-22483777 ಗೆ ಸಂಪರ್ಕಿಸಬಹುದು ಅಥವಾ ಬಿಎಂಟಿಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ವಂತಾರದ ಬಗ್ಗೆ ಮರುತನಿಖೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








