ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಹಾಗೂ ಅತ್ಯಂತ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಸಹೋದ್ಯೋಗಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, ರಾಜ್ಯದ ಗದ್ದುಗೆಯನ್ನು ಅಲಂಕರಿಸಲಿರುವ ಡಿಕೆಶಿಗೆ ಕರ್ನಾಟಕದ ಮುಂದಿನ ಸವಾಲುಗಳು ಹಾಗೂ ಸೈದ್ಧಾಂತಿಕ ಬದ್ಧತೆಯ ಮಹತ್ವವನ್ನು ನೆನಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಆ ಎಕ್ಸ್ ಪೋಸ್ಟ್ನ ಸಂಪೂರ್ಣ ಸಾರಾಂಶ ಇಲ್ಲಿದೆ:
1. ಡಿಕೆಶಿ ಸಂಘಟನಾ ಚಾತುರ್ಯಕ್ಕೆ ಸಿದ್ದರಾಮಯ್ಯ ಶ್ಲಾಘನೆ
“ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು” ಎಂದು ಸಿದ್ದರಾಮಯ್ಯ ಪತ್ರವನ್ನು ಆರಂಭಿಸಿದ್ದಾರೆ. “ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಯಾತೀತ ನಿಷ್ಠೆಯನ್ನು ಒಬ್ಬ ಸಹೋದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ” ಎಂದು ಡಿಕೆಶಿ ಅವರ ನಾಯಕತ್ವ ಗುಣಗಳನ್ನು ಕೊಂಡಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು.
ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರೀಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ… pic.twitter.com/NAAvaUBv7A
— Siddaramaiah (@siddaramaiah) May 30, 2026
2. ದೇಶಕ್ಕೇ ಮಾದರಿ ಕರ್ನಾಟಕ: ಅಭಿವೃದ್ಧಿಯ ಬಂಡಿ ಎಳೆಯುವ ಜವಾಬ್ದಾರಿ
ಕರ್ನಾಟಕದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಹೆಮ್ಮೆಯಿಂದ ಹಂಚಿಕೊಂಡಿರುವ ಸಿದ್ದರಾಮಯ್ಯ, “ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲದೆ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ” ಎಂದಿದ್ದಾರೆ.
8 ವರ್ಷಗಳ ಆಡಳಿತದ ಹೆಮ್ಮೆ: > “ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ಧತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು.”
3. ಜನರಲ್ಲಿ ಭರವಸೆ ಮೂಡಿಸುವ ಆಡಳಿತ ಅಗತ್ಯ
ದೇಶದಲ್ಲಿ ಸದ್ಯ ಇರುವ ಆರ್ಥಿಕ ಆತಂಕಗಳ ಕುರಿತು ಪ್ರಸ್ತಾಪಿಸಿರುವ ಅವರು, “ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಡಿಕೆಶಿಗೆ ಕಿವಿಮಾತು ಹೇಳಿದ್ದಾರೆ.
4. “ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬಾರದು”
ಪಕ್ಷದ ಸಿದ್ಧಾಂತದ ಬಗ್ಗೆ ಸಿದ್ದರಾಮಯ್ಯ ಅವರು ಅತ್ಯಂತ ಗಂಭೀರವಾದ ರಾಜಕೀಯ ಸಂದೇಶವೊಂದನ್ನು ರವಾನಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು” ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ನಮ್ಮ ಮೇಲಿದ್ದು, ಕಾಂಗ್ರೆಸ್ ಇತಿಹಾಸವೇ ನಮಗೆ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
5. ದೇಶ ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟದ ಕರೆ
ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಧ್ರುವೀಕರಣದ ರಾಜಕಾರಣದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, “ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
7 ಕೋಟಿ ಕನ್ನಡಿಗರು ನಿಮ್ಮ ಜೊತೆಗಿದ್ದಾರೆ: > “ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸುವುದೇ ದೇಶವನ್ನು ಉಳಿಸಲು ಇರುವ ಏಕೈಕ ದಾರಿ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ. ನಿಮಗೆ ಸದಾ ಯಶಸ್ಸು ಸಿಗಲಿ” ಎಂದು ಭಾವನಾತ್ಮಕವಾಗಿ ಸಿದ್ದರಾಮಯ್ಯ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಜೂನ್.1ರಂದು ಕಲಬುರ್ಗಿಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ತೇಲ್ಕೂರ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








