ಶಿವಮೊಗ್ಗ: ಜಿಲ್ಲೆಯ ಸೊರಬ ನಗರದ ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಎಂಬುವರು ಮೆಡಿಕಲ್ಸ್ ಮಾರಾಟ ಮಾಡಿ, ಹಣ ಪಡೆದು ಮೋಸ ಮಾಡಿದಂತ ಆರೋಪ ಕೇಳಿ ಬಂದಿದೆ. ಕೊಟ್ಟ ಹಣ ವಾಪಾಸ್ ಕೊಡುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜಾತಿ ಹೆಸರಿಡಿದು ಬೈದ ಕಾರಣ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ನಗರದ ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಅವರು, ಪುನೀತ್ ಕುಮಾರ ಎಂಬುವರಿಗೆ ತಮ್ಮ ಮೆಡಿಕಲ್ ಮಾರಾಟ ಮಾಡಲು ಮಾತುಕತೆ ನಡೆಸಿದ್ದರು. ದಿನಾಂಕ 31-08-2024ರಂದು ಹಲವರ ಸಮ್ಮುಖದಲ್ಲಿ ನಡೆದಿದ್ದಂತ ಮಾತುಕತೆಯಲ್ಲಿ ಪ್ರಕೃತಿ ಮೆಡಿಕಲ್ಸ್ ಮಾರಾಟ ಮಾಡುವುದಕ್ಕೂ ಒಪ್ಪಿಕೊಂಡಿದ್ದರು. ಪ್ರಕೃತಿ ಮೆಡಿಕಲ್ಸ್ ಖರೀದಿಸಲು ಪುನೀತ್ ಕುಮಾರ್ ಅವರು ಹರೀಶ್ ಭಟ್ ಗೆ ನಗದು, ಚೆಕ್ ಮೂಲಕ ಹಂತ ಹಂತವಾಗಿ 35 ಲಕ್ಷ ಹಣವನ್ನು ನೀಡಿದ್ದರು.
ಈ ರೀತಿಯಾಗಿ ಹಣ ಪಡೆದಿದ್ದಂತ ಹರೀಶ್ ಭಟ್ ಮಾತ್ರ, ಪ್ರಕೃತಿ ಮೆಡಿಕಲ್ಸ್ ಪುನೀತ್ ಕುಮಾರ್ ಹೆಸರಿಗೆ ಮಾಡಿಕೊಡದೇ ಸತಾಯಿಸಿದ್ದರು. ಹತ್ತಾರು ತಿಂಗಳಿನಿಂದ ಅತ್ತ ಮೆಡಿಕಲ್ಸ್ ಪುನೀತ್ ಕುಮಾರ್ ಹೆಸರಿಗೆ ಮಾಡಿಕೊಡದೇ, ಇತ್ತ ಕೊಟ್ಟ ಹಣವನ್ನು ಕೊಡದೇ ಕೈಗೆ ಸಿಗದಂತೆ ಹರೀಶ್ ಭಟ್ ಓಡಾಡಿಕೊಂಡಿದ್ದರು. ದಿನಾಂಕ 26-06-2025ರಂದು ಮಧ್ಯಾಹ್ನ ಹರೀಶ್ ಭಟ್ ಸೊರಬದಲ್ಲಿ ಇರುವಂತ ವಿಷಯ ತಿಳಿದಂತ ಪುನೀತ್ ಕುಮಾರ್ ಮೆಡಿಕಲ್ಸ್ ಯಾವಾಗ ಮಾಡಿಕೊಡುತ್ತೀರಿ.? ಇಲ್ಲವೇ ನಿಮಗೆ ಕೊಟ್ಟಂತ 35 ಲಕ್ಷ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ಕುಮಾರ್ ಹಾಗೂ ಹರೀಶ್ ನಡುವೆ ವಾಗ್ವಾದ ನಡೆದಿದೆ. ಆಗ ಹರೀಶ್ ಭಟ್ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ, ಜಾತಿ ಹೆಸರಿಡಿದು ನಿಂದನೆ ಮಾಡಿದ್ದಾರೆ ಎಂಬುದಾಗಿ ಪುನೀತ್ ಕುಮಾರ್ ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರು ಆಧರಿಸಿ ಸೊರಬ ಠಾಣೆಯಲ್ಲಿ ದಿನಾಂಕ 15-07-2025ರಂದು ಪ್ರಕೃತಿ ಮೆಡಿಕಲ್ಸ್ ಮಾಲೀಕರಾದಂತ ಹರೀಶ್ ಭಟ್, ಪತ್ನಿ ವಸುದಾ ಭಟ್ ವಿರುದ್ಧ ಬಿಎನ್ ಎಸ್ 2023ರ ಕಲಂ 115(2), 352, 318(4), 351(2), 3(5) ಹಾಗೂ ಎಸ್ಸಿ, ಎಸ್ಟಿ ಪ್ರಿವೆನ್ಷನ್ ಕಾಯ್ದೆಯ 2015ರ ಕಲಂ 3(1), (ಆರ್), (ಎಸ್), 3(2) (ವಿಎ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದಂತ ಸೊರಬ ಠಾಣೆಯ ಪೊಲೀಸರು, ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಅವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು