ಹಾಸನ : ಹಾಸನದಲ್ಲಿ ಕಾಂಗ್ರೆಸ್ ಪಕ್ಷವು ಇಂದು ಬೃಹತ್ ಜನಕಲ್ಯಾಣ ಸಮಾವೇಶವನ್ನು ಹಮ್ಮಿಕೊಂಡಿದ್ದು, ಎಸ್.ಎಂ ಕೃಷ್ಣ ನಗರದಲ್ಲಿ ಈಗಾಗಲೇ ಬೃಹತ್ ವೇದಿಕೆ ಸಿದ್ಧಾವಾಗಿದೆ.ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹಾಸನಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಮಾವೇಶದ ವೇದಿಕೆಗೆ ತೆರಳಿದ್ದಾರೆ.
ಹಾಸನ ಹೊರವಲಯದ ಭುವನಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯು ವಕ್ಫ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ, ಬೆಳಗಾವಿ ಅಧಿವೇಶನ ಇರುವುದರಿಂದ ಬಿಜೆಪಿ ಈ ರೀತಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿಯು ವಕ್ಫ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ.ವಕ್ಫ್ ವಿಚಾರವಾಗಿ ಮೊದಲು ನೋಟಿಸ್ ನೀಡಿದ್ದು ಯಾರು? ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಅತೀ ಹೆಚ್ಚು ನೋಟಿಸ್ ನೀಡಲಾಗಿದೆ ಎಂದರು.
ಅಧಿವೇಶನದಲ್ಲಿ ಅವರಿಗೆ ಚರ್ಚಿಸಲು ಬೇರೆ ಯಾವ ವಿಷಯ ಕೂಡ ಇಲ್ಲ. ಬೈ ಎಲೆಕ್ಷನ್ ನಲ್ಲಿ ಮೂರು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. 25 ವರ್ಷದ ನಂತರ ಶಿಗ್ಗಾವಿಯಲ್ಲಿ, ಚನ್ನಪಟ್ಟಣದಲ್ಲಿ ಗೆದ್ದಿದ್ದೇವೆ. ಅದಕ್ಕೆ ಈ ಪ್ರತಿಭಟನೆ ನಾಟಕ ಶುರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದೆ ವೇಳೆ ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ತೀರ್ಪು ಏನು ಬಂದಿದೆ ಎಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.