ಬೆಂಗಳೂರು : ಟಿಪ್ಪರ್ ಲಾರಿ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಮೈಸೂರು ರಸ್ತೆಯ ಆರ್.ಆರ್.ವೈದ್ಯಕೀಯ ಕಾಲೇಜು ಬಳಿ ನಡೆದಿದೆ. ಈ ಕಾಲೇಜಿನಲ್ಲೇ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಕೃತಿಕಾ (21) ಮೃತ ಯುವತಿ ಎಂದು ತಿಳಿದು ಬಂದಿದೆ.
ಸ್ಕೂಟರ್ ಚಲಾಯಿಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿನಿ ಹಂಸ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಿನ್ನೆ ಸಂಜೆ 4:15ರ ಸುಮಾರಿಗೆ ಸ್ಕೂಟರ್ ಮೂಲಕ ಹೊರಟ ಕೃತಿಕಾ ಹಾಗೂ ಹಂಸ ಆರ್.ಆರ್.ವೈದ್ಯಕೀಯ ಕಾಲೇಜಿನ ನಿರ್ಗಮನ ದ್ವಾರದಿಂದ ಮೈಸೂರು ರಸ್ತೆಯ ಕಡೆ ತೆರಳುತ್ತಿದ್ದರು. ಈ ವೇಳೆ ಮೈಸೂರು ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ಚಲಾಯಿಸುತ್ತಿದ್ದ ಹಂಸ ರಸ್ತೆಯ ಎಡಭಾಗಕ್ಕೆ ಬಿದ್ದರೆ, ಹಿಂಬದಿ ಸವಾರೆ ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ.ದುರಾದೃಷ್ಟವಶಾತ್ ಕೃತಿಕಾ ಅವರ ದೇಹದ ಮೇಲೆ ಟಿಪ್ಪರ್ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಹಂಸಳನ್ನು ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








