ನವದೆಹಲಿ : 100 ಕೋಟಿ ರೂ.ಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರ ಜಾಮೀನು ಅರ್ಜಿಯ ಕುರಿತು ಅಕ್ಟೋಬರ್ 14 ರೊಳಗೆ ಉತ್ತರ ನೀಡುವಂತೆ ವಿಶೇಷ ಸಿಬಿಐ ನ್ಯಾಯಾಲಯವು ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ.
ಮಾಜಿ ಸಚಿವ ಅನಿಲ್ ದೇಶಮುಖ್ ಅವರನ್ನು ಕಳೆದ ವರ್ಷ ನವೆಂಬರ್ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದು, ತನಿಖೆ ನಡೆಸುತ್ತಿದೆ.
ಸಿಬಿಐ ಹಿರಿಯ ರಾಜಕಾರಣಿ ವಿರುದ್ಧ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತ್ತು. ಬಾಂಬೆ ಹೈಕೋರ್ಟ್ ಆದೇಶದ ನಂತರ ಪ್ರಕರಣ ಸಂಬಂಧ ಏಪ್ರಿಲ್ 2021 ರಲ್ಲಿ ಎಫ್ಐಆರ್ ದಾಖಲಿಸಿದೆ. ಎನ್ಸಿಪಿ ನಾಯಕ ದೇಶಮುಖ್ ಅವರು ನಗರದ ಅರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.
Rs 100 crores corruption case | Special CBI court directs CBI to file reply on former Maharashtra minister Anil Deshmukh's bail plea, by October 14, the next date of hearing
— ANI (@ANI) October 6, 2022
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅನಿಲ್ ದೇಶಮುಖ್, ಕಳೆದ ವಾರ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಇಡಿ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ಅಕ್ಟೋಬರ್ 13 ರವರೆಗೆ ಆದೇಶವನ್ನು ತಡೆ ಹಿಡಿದಿತ್ತು.
ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ದೇಶಮುಖ್ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ಏನಿದು ಪ್ರಕರಣ?
ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು, ಅಂದಿನ ಗೃಹ ಸಚಿವ ದೇಶ್ಮುಖ್ ಅವರು ಮಹಾನಗರದಲ್ಲಿರುವ ರೆಸ್ಟೋರೆಂಟ್ಗಳು ಮತ್ತು ಬಾರ್ಗಳಿಂದ ತಿಂಗಳಿಗೆ 100 ಕೋಟಿ ರೂ. ಸಂಗ್ರಹಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದಾರೆ.
ದೇಶಮುಖ್ ಅವರು ಆರೋಪಗಳನ್ನು ನಿರಾಕರಿಸಿದ್ದರು.ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ನಂತರ ಏಪ್ರಿಲ್ 2021 ರಲ್ಲಿ ತಮ್ಮ ಕ್ಯಾಬಿನೆಟ್ ಹುದ್ದೆಯಿಂದ ಕೆಳಗಿಳಿದರು.
ಆರೋಪಿಗಳು ಮತ್ತು ಇತರರು ತಮ್ಮ ಸಾರ್ವಜನಿಕ ಕರ್ತವ್ಯಗಳ ಅಸಮರ್ಪಕ ಮತ್ತು ಅಪ್ರಾಮಾಣಿಕ ನಿರ್ವಹಣೆಗಾಗಿ ಅನಗತ್ಯ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯ ವೇಳೆ ಬಹಿರಂಗವಾಗಿದೆ ಎಂದು ಸಿಬಿಐ ಆರೋಪಿಸಿದೆ.
ದೇಶಮುಖ್ ಅವರ ಮಾಜಿ ಸಹಾಯಕರಾದ ಸಂಜೀವ್ ಪಲಾಂಡೆ ಮತ್ತು ಕುಂದನ್ ಶಿಂಧೆ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.