ಬೆಂಗಳೂರು: ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದು ಕೂಡ ಅವಶ್ಯ. ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಜನರೇ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ, 2025 ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ಮಾಡುವ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವರು, ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆಯೇ ಇರಲಿಲ್ಲ. ಇದರಿಂದಾಗಿ ಸಾವುಗಳು ಸಂಭವಿಸುತ್ತಿತ್ತು. 80, 90 ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಈ ರೀತಿ ಸರ್ಕಾರ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ ಎಂದರು.
ಪ್ರವಾಹ ಸಂಕಷ್ಟದಲ್ಲಿ ಸಿದ್ದರಾಮಯ್ಯ ಬರ್ಥಡೇ ಆಚರಣೆ ಔಚಿತ್ಯವನ್ನು ಜನ ನಿರ್ಧರಿಸುತ್ತಾರೆ – ಸಚಿವ ಸುಧಾಕರ್
ಮಲೇರಿಯಾ, ಡೆಂಘೀ ಮೊದಲಾದ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಅಂತಹ ಕಡೆಗಳಲ್ಲಿ ಸ್ವಾಭಾವಿಕವಾಗಿ ಮಳೆ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ದೇಶದಲ್ಲಿ 2020 ರಲ್ಲಿ 1,86,532 ಮಲೇರಿಯಾ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಕರ್ನಾಟಕದಲ್ಲಿ 1,701 ಪ್ರಕರಣಗಳು ವರದಿಯಾಗಿದ್ದವು. ಅಂದರೆ ರಾಜ್ಯದ ಪಾಲು ಶೇ.0.9 ಆಗಿತ್ತು. ಇದೇ ವರ್ಷ ಜಗತ್ತಿನಲ್ಲಿ 21 ಕೋಟಿ ಜನರು ಮಲೇರಿಯಾ ರೋಗಕ್ಕೊಳಗಾಗಿದ್ದು, 6.27 ಲಕ್ಷ ರೋಗಿಗಳು ಮೃತಪಟ್ಟಿದ್ದರು. ರಾಜ್ಯದಲ್ಲಿ ಮಲೇರಿಯಾ ನಿಯಂತ್ರಣದಲ್ಲಿದ್ದು, ಇದಕ್ಕಾಗಿ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದರು.
ಮಲೇರಿಯಾ ರೋಗವನ್ನು ಸಾಧಾರಣ ರೋಗ ಎಂದು ಪರಿಗಣಿಸುವಂತಿಲ್ಲ. ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 100 ಪ್ರಕರಣ ಮಾತ್ರ ವರದಿಯಾಗಿದೆ. ಈ ಮಳೆಗಾಲವು ಅತ್ಯಂತ ಸವಾಲಿನ ಅವಧಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚು ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದರು.
75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್ – ಸಚಿವ ಸುಧಾಕರ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಿಸಿದಾಗ ಮಾತ್ರ ಇದು ಸಾಧ್ಯ. ಮಲೇರಿಯಾ ಮಾತ್ರವಲ್ಲದೆ, ಕ್ಷಯ ರೋಗವನ್ನು ಕೂಡ ನಿರ್ಮೂಲನೆ ಮಾಡಬೇಕಿದೆ. ಮಲೇರಿಯಾ ನಿರ್ಮೂಲನೆಗೆ 2030 ರ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ 2025 ರ ಗುರಿ ಇರಿಸಿಕೊಳ್ಳಲಾಗಿದೆ. ಸರ್ಕಾರದ ಕೆಲಸ, ಸಂಘ, ಸಂಸ್ಥೆಗಳ ನೆರವು ಹಾಗೂ ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ. ಪ್ರತಿ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮ ಮಾಡಿ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೇರಿಯಾ ಹೆಚ್ಚಿರುವ ಕಡೆಗಳಿಗೆ ಹೋಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರ್ಮೂಲನೆ ಮಾಡಿದರೆ ಮಾತ್ರ ಸಾಲುವುದಿಲ್ಲ. ಅದು ಮತ್ತೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಪ್ರಕರಣ ಕಂಡುಬಂದಿಲ್ಲ ಎಂದಾಕ್ಷಣ, ಅಲ್ಲಿ ರೋಗ ಇಲ್ಲ ಎಂದು ಭಾವಿಸಬಾರದು. ಸಾಮೂಹಿಕ ಪ್ರಯತ್ನ, ಸಂಘಟಿತ ಕಾರ್ಯದ ಮೂಲಕ ಮಲೇರಿಯಾ ನಿರ್ಮೂಲನೆ ಕಾರ್ಯ ನಡೆಯಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಬಾಲಕಿಗೆ ಶ್ಲಾಘನೆ
ಮಲೇರಿಯಾ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರ ಆಯೋಜಿಸಿದ್ದ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತೆಯಾದ ವಿದ್ಯಾರ್ಥಿನಿ ಅವನಿ ಹೆಗಡೆ ಅವರನ್ನು ಸಚಿವರು ಶ್ಲಾಘಿಸಿದರು.