ಹೈದ್ರಾಬಾದ್ : ಪುಷ್ಪಾ 2 ಸಿನೆಮಾ ವೀಕ್ಷಣೆಯ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಇದೊಂದು ದುರದೃಷ್ಟಕರ ಅಪಘಾತ. ಇದರಿಂದ ಮನೆಯಲ್ಲಿ ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ ಎಂದು ಅಲ್ಲು ಅರ್ಜುನ್ ಭಾವುಕರಾದರು.
ಇಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ನಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೃತ ಮಹಿಳೆ ಮಗು ಹೇಗಿದೆ ಎಂಬುದರ ಬಗ್ಗೆ ನಾನು ಗಂಟೆಗೊಮ್ಮೆ ವೈದ್ಯರು, ಕುಟುಂಬಸ್ಥರಿಂದ ಮಾಹಿತಿ ಪಡೆಯುತ್ತಿದ್ದೇನೆ. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಒಂದೇ ಒಂದು ಒಳ್ಳೆಯ ವಿಷಯವೆಂದರೆ ಹುಡುಗ ಸುಧಾರಿಸುತ್ತಿದ್ದಾನೆ.ಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದು ಮತ್ತು ಜನರು ನಗುವಿನೊಂದಿಗೆ ಹೊರಡಬೇಕೆಂದು ಬಯಸುವುದು ನನ್ನ ಸಂಪೂರ್ಣ ಪ್ರಯತ್ನವಾಗಿದೆ ಎಂದು ಹೇಳಿದರು.
ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ಹೊರಡಿ ಎಂದು ಪೊಲೀಸರು ಹೇಳಿದರು. ನಾನು ಆ ಕ್ಷಣವೇ ಮನೆಗೆ ನಡೆದೆ. ಮರುದಿನವೇ ಸಾವಿನ ವಿಚಾರ ತಿಳಿಯಿತು. ನನಗೆ ಶಾಕ್ ಆಯಿತು. ನನಗೆ ಆ ವಿಚಾರ ಗೊತ್ತಾಗಿದ್ದರೆ ನಾನು ಸಿನಿಮಾ ನೋಡ್ತಾನೇ ಇರಲಿಲ್ಲ. ನಾನು ನನ್ನ ಆಪ್ತರಿಗೆ ಕರೆ ಮಾಡಿ ಏನೆಂದು ವಿಚಾರಿಸಿಕೊಳ್ಳಿ ಎಂದು ಹೇಳಿದೆ. ಅದೇ ದಿನ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ, ಬೇಡ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಭಾವ ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲು ಅರ್ಜುನ್ ಅವರು ಒಪ್ಪಿಲ್ಲ.ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಎಲ್ಲರೂ ಒಳ್ಳೆಯ ವಿಚಾರಕ್ಕೆ ಸೇರಿದ್ದರು. ಇದು ಅಪಘಾತ ಅಷ್ಟೇ. ಇದು ಯಾರ ನಿಯಂತ್ರಣದಲ್ಲೂ ಇರಲಿಲ್ಲ. ನಾನು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ ಎಂದರು.
ಹಲವು ವದಂತಿಗಳು ಹಬ್ಬುತ್ತಿವೆ. ನಾನು ಯಾವ ರಾಜಕಾರಣಿಯನ್ನೂ, ಸರ್ಕಾರವನ್ನೂ ದೂರುವುದಿಲ್ಲ. ಸಾಕಷ್ಟು ವದಂತಿ ಹಬ್ಬಿಸಲಾಗುತ್ತಿದೆ. ನನ್ನ ಚಾರಿತ್ಯ ಹರಣ ಆಗುತ್ತಿದೆ. ನಾನು ಎಲ್ಲಾ ಸೆಲಬ್ರೇಷನ್ನ ರದ್ದು ಮಾಡಿದ್ದೇನೆ. ಮೂರು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ ಹೇಗಿದೆ ಎಂಬುದನ್ನು ಕೂಡ ನಾನು ನೋಡುತ್ತಿಲ್ಲ. ಮನೆಯಲ್ಲಿ ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.