ರಾತ್ರಿ ಉಳಿದ ಅಡುಗೆಯನ್ನು ಫ್ರಿಡ್ಜ್ನಲ್ಲಿಟ್ಟು ಮರುದಿನ ಬಿಸಿ ಮಾಡಿ ಸೇವಿಸುವುದು ನಮ್ಮಲ್ಲಿ ಸಾಮಾನ್ಯ ಅಭ್ಯಾಸ. ಆದರೆ, ಸರಿಯಾದ ಕ್ರಮದಲ್ಲಿ ಸಂಗ್ರಹಿಸದಿದ್ದರೆ ಈ ಆಹಾರವು ಪ್ರಾಣಕ್ಕೆ ಕಂಟಕವಾಗಬಹುದು ಎಂದು ಲೀಸೆಸ್ಟರ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಮೈಕ್ರೋಬಯಾಲಜಿ ಹಿರಿಯ ಉಪನ್ಯಾಸಕಿ ಡಾ. ಪ್ರೈಮ್ರೋಸ್ ಫ್ರೀಸ್ಟೋನ್ ಎಚ್ಚರಿಸಿದ್ದಾರೆ.
ಆಹಾರ ವಿಷಪೂರಿತವಾಗಲು (Food Poisoning) ಕೇವಲ ಹಳಸಿದ ಆಹಾರವಷ್ಟೇ ಅಲ್ಲ, ಅದನ್ನು ಶೇಖರಿಸುವ ವಿಧಾನವೂ ಮುಖ್ಯ ಕಾರಣ ಎಂದು ಅವರು ವಿವರಿಸಿದ್ದಾರೆ.
ಯಾವ ಆಹಾರಗಳು ಹೆಚ್ಚು ಅಪಾಯಕಾರಿ?
ಅನೇಕ ಜನರು ಪಿಜ್ಜಾ, ಅನ್ನ, ಪಾಸ್ಟಾ ಮತ್ತು ಚಿಕನ್ ಅನ್ನು ಫ್ರಿಡ್ಜ್ನಲ್ಲಿಟ್ಟು ತಿನ್ನುತ್ತಾರೆ. ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಅತಿ ವೇಗವಾಗಿ ಬೆಳೆಯುವ ಸಾಧ್ಯತೆ ಇರುತ್ತದೆ.
ಪಿಜ್ಜಾ: ಪಿಜ್ಜಾ ತಯಾರಾದ ಎರಡು ಗಂಟೆಗಳ ಒಳಗೆ ಫ್ರಿಡ್ಜ್ ಸೇರಬೇಕು. ವಿಶೇಷವೆಂದರೆ, ಪಿಜ್ಜಾ ಮೇಲೆ ಉದುರಿಸುವ ಒಣಗಿದ ತುಳಸಿ (Basil) ಮತ್ತು ಮೆಣಸಿನ ಪುಡಿಯಂತಹ ಮಸಾಲೆಗಳಲ್ಲಿಯೂ ಬ್ಯಾಕ್ಟೀರಿಯಾಗಳು ಇರಬಹುದು. ಇವುಗಳನ್ನು ಎರಡು ದಿನಗಳ ಒಳಗಾಗಿ ಸೇವಿಸುವುದು ಉತ್ತಮ.
ಚಿಕನ್: ಬೇಯಿಸಿದ ಚಿಕನ್ನಲ್ಲಿ ರಕ್ತದ ಅಂಶವಿದ್ದರೆ ಅದನ್ನು ಎಂದಿಗೂ ಉಳಿಸಿಡಬೇಡಿ. ಸರಿಯಾಗಿ ಬೇಯಿಸಿದ ಚಿಕನ್ ಅನ್ನು ಗರಿಷ್ಠ 3 ದಿನಗಳವರೆಗೆ ಮಾತ್ರ ಫ್ರಿಡ್ಜ್ನಲ್ಲಿ ಇಡಬಹುದು.
ಅನ್ನ (Rice): ಅಕ್ಕಿಯಲ್ಲಿ ‘ಬ್ಯಾಸಿಲಸ್ ಸಿರಿಯಸ್’ ಎಂಬ ಬ್ಯಾಕ್ಟೀರಿಯಾದ ಬೀಜಕಗಳು (Spores) ಇರುತ್ತವೆ. ಇವು ಶಾಖವನ್ನು ತಡೆದುಕೊಳ್ಳಬಲ್ಲವು. ಹಾಗಾಗಿ, ಉಳಿದ ಅನ್ನವನ್ನು ಬೇಗನೆ ತಣಿಸಿ ಫ್ರಿಡ್ಜ್ನಲ್ಲಿ ಇಡಬೇಕು ಮತ್ತು 24 ಗಂಟೆಗಳ ಒಳಗಾಗಿ ತಿನ್ನಬೇಕು.
ಕ್ಯಾನ್ಡ್ (Canned) ಆಹಾರಗಳ ಸಂಗ್ರಹಣೆ ಹೇಗೆ?
ಡಬ್ಬಿಗಳಲ್ಲಿ ಬರುವ ಆಹಾರಗಳ ಶೇಖರಣೆಯೂ ವಿಭಿನ್ನವಾಗಿರುತ್ತದೆ:
ಹೆಚ್ಚು ಆಮ್ಲೀಯ ಆಹಾರ: ಟೊಮೆಟೊದಂತಹ ಆಮ್ಲೀಯ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ 5 ರಿಂದ 7 ದಿನಗಳವರೆಗೆ ಇಡಬಹುದು.
ಕಡಿಮೆ ಆಮ್ಲೀಯ ಆಹಾರ: ಮಾಂಸ, ಮೀನು, ತರಕಾರಿ ಅಥವಾ ಪಾಸ್ಟಾಗಳನ್ನು ಗರಿಷ್ಠ 3 ದಿನಗಳವರೆಗೆ ಮಾತ್ರ ಇಡಬೇಕು.
ಆಹಾರ ವಿಷವಾಗದಂತೆ ತಡೆಯಲು ಈ ಕ್ರಮ ಪಾಲಿಸಿ:
ಸಮಯದ ಮಿತಿ: ಆಹಾರ ತಯಾರಾದ 2 ಗಂಟೆಗಳ ಒಳಗೆ ಅದನ್ನು ಫ್ರಿಡ್ಜ್ನಲ್ಲಿ ಇರಿಸಿ. ಒಂದು ವೇಳೆ ಹೊರಗಿನ ತಾಪಮಾನ 32 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದ್ದರೆ, 1 ಗಂಟೆಯೊಳಗೆ ಫ್ರಿಡ್ಜ್ನಲ್ಲಿ ಇಡುವುದು ಕಡ್ಡಾಯ.
ಮುಚ್ಚಳ ಬಳಸಿ: ಫ್ರಿಡ್ಜ್ನಲ್ಲಿ ಇಡುವಾಗ ಆಹಾರವನ್ನು ಸರಿಯಾಗಿ ಮುಚ್ಚಿಡಿ.
ಅತಿಯಾದ ಶೇಖರಣೆ ಬೇಡ: ಅನ್ನದಂತಹ ಪದಾರ್ಥಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಇಟ್ಟುಕೊಳ್ಳಬೇಡಿ.
“ಹೆಚ್ಚಿನ ಜನರು ಅಡುಗೆ ಸರಿಯಾಗಿ ಮಾಡದಿದ್ದರೆ ಮಾತ್ರ ಫುಡ್ ಪಾಯಿಸನ್ ಆಗುತ್ತದೆ ಎಂದು ನಂಬಿದ್ದಾರೆ. ಆದರೆ, ಉಳಿದ ಆಹಾರವನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿರುವುದು ಕೂಡ ಅಷ್ಟೇ ದೊಡ್ಡ ಅಪಾಯ,” ಎಂದು ಡಾ. ಫ್ರೀಸ್ಟೋನ್ ತಿಳಿಸಿದ್ದಾರೆ.








