ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ದಿನನಿತ್ಯದ ಬಹುತೇಕ ಕೆಲಸಗಳಿಗೆ ಮೊಬೈಲ್ ಫೋನ್ ಗಳನ್ನೇ ಅವಲಂಬಿಸಿದ್ದೇವೆ. ಆಹಾರ ಆರ್ಡರ್ ಮಾಡುವುದರಿಂದ ಹಿಡಿದು, ಆನ್ ಲೈನ್ ಶಾಪಿಂಗ್, ಮ್ಯಾಪ್ ಮತ್ತು ಕ್ಯಾಬ್ ಬುಕಿಂಗ್ ವರೆಗೆ ನಾನಾ ರೀತಿಯ ಆಪ್ ಗಳನ್ನು ಬಳಸುತ್ತೇವೆ. ಆದರೆ, ನಿಮಗೆ ಗೊತ್ತೇ? ಕೆಲವು ಆಪ್ ಗಳನ್ನು ನೀವು ಕ್ಲೋಸ್ ಮಾಡಿದ ನಂತರವೂ ಅವು ನಿಮ್ಮ ಲೊಕೇಶನ್ (ಸ್ಥಳ) ಅನ್ನು ಟ್ರ್ಯಾಕ್ ಮಾಡುತ್ತಿರುತ್ತವೆ.
ಹೌದು, ಆಹಾರ, ಶಾಪಿಂಗ್ ಮತ್ತು ಕ್ಯಾಬ್ ಬುಕಿಂಗ್ ಆಪ್ ಗಳಿಗೆ ಲೊಕೇಶನ್ ಅವಶ್ಯಕತೆ ಇರುತ್ತದೆ. ಆದರೆ ಯಾವುದೇ ಅಗತ್ಯವಿಲ್ಲದಿದ್ದರೂ ಅಥವಾ ಆಪ್ ಬಳಸದೇ ಇದ್ದಾಗಲೂ ಕೆಲವು ಆಪ್ ಗಳು ನಿಮ್ಮ ಲೊಕೇಶನ್ ಅನ್ನು ಹಿನ್ನೆಲೆಯಲ್ಲಿ (Background) ಟ್ರ್ಯಾಕ್ ಮಾಡುತ್ತಿರುತ್ತವೆ. ಇದು ನಿಮ್ಮ ಗೌಪ್ಯತೆಗೆ ಧಕ್ಕೆ ತರಬಹುದು. ಇದನ್ನು ತಡೆಯಲು ನಿಮ್ಮ ಮೊಬೈಲ್ ನಲ್ಲಿ ಆಪ್‌ಗಳ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಹೇಗೆ ಆಫ್ ಮಾಡಬೇಕು ಎಂಬುದರ ವಿವರ ಇಲ್ಲಿದೆ:
ಲೊಕೇಶನ್ ಟ್ರ್ಯಾಕಿಂಗ್ ಆಫ್ ಮಾಡಲು ಇಲ್ಲಿದೆ ಹಂತ-ಹಂತದ ಮಾಹಿತಿ:
ಹಂತ 1: ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ಸ್ (Settings) ಗೆ ಹೋಗಿ.
ಹಂತ 2: ಸೆಟ್ಟಿಂಗ್ಸ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಲೊಕೇಶನ್ (Location) ಆಯ್ಕೆಯ ಮೇಲೆ ಕ್ಲಿಕ್ ಮಾಡಿ. (ಒಂದು ವೇಳೆ ಲೊಕೇಶನ್ ಆಯ್ಕೆ ಸಿಗದಿದ್ದರೆ, ಸೆಟ್ಟಿಂಗ್ಸ್‌ನ ಮೇಲ್ಭಾಗದಲ್ಲಿರುವ ಸರ್ಚ್ ಬಾರ್‌ನಲ್ಲಿ ‘Location’ ಎಂದು ಟೈಪ್ ಮಾಡಿ ಹುಡುಕಬಹುದು).
ಹಂತ 3: ಅಲ್ಲಿ ನಿಮಗೆ ಲೊಕೇಶನ್ ಪರ್ಮಿಷನ್ಸ್ (Location Permissions) ಅಥವಾ ಆಪ್ ಪರ್ಮಿಷನ್ಸ್ (App Permissions) ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಫೋನ್‌ನಲ್ಲಿರುವ ಆಪ್‌ಗಳ ಪಟ್ಟಿ ಕಾಣಸಿಗುತ್ತದೆ.
ಹಂತ 4: ಯಾವೆಲ್ಲಾ ಆಪ್‌ಗಳಿಗೆ ಲೊಕೇಶನ್ ಆಕ್ಸೆಸ್ ನೀಡಲಾಗಿದೆ ಎಂಬುದನ್ನು ಅಲ್ಲಿ ನೋಡಬಹುದು. ನಿಮಗೆ ಅಗತ್ಯವಿರುವ ಆಪ್‌ಗಳ ಮುಂದೆ ‘Only While Using the App’ (ಆಪ್ ಬಳಸುವಾಗ ಮಾತ್ರ) ಎಂಬ ಆಯ್ಕೆಯನ್ನು ಆರಿಸಿ. ಇದರಿಂದ ನೀವು ಆಪ್ ಓಪನ್ ಮಾಡಿದಾಗ ಮಾತ್ರ ಅದು ಲೊಕೇಶನ್ ಟ್ರ್ಯಾಕ್ ಮಾಡುತ್ತದೆ, ಆಪ್ ಬಂದ್ ಮಾಡಿದ ತಕ್ಷಣ ಟ್ರ್ಯಾಕಿಂಗ್ ನಿಲ್ಲುತ್ತದೆ.
ಹಂತ 5: ಇನ್ನು ಯಾವುದೇ ರೀತಿಯ ಲೊಕೇಶನ್ ಅಗತ್ಯವಿಲ್ಲದ ಆಪ್‌ಗಳಿದ್ದರೆ (ಉದಾಹರಣೆಗೆ ಕೆಲವು ಗೇಮ್ಸ್ ಅಥವಾ ಕ್ಯಾಲ್ಕುಲೇಟರ್ ಇತ್ಯಾದಿ), ಅವುಗಳ ಮುಂದೆ ‘Not Allowed’ ಅಥವಾ ‘Don’t Allow’ ಆಯ್ಕೆಯನ್ನು ಆರಿಸಿ ಲೊಕೇಶನ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿ.
ಈ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಯನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು.








