ಇತ್ತೀಚಿನ ಜಟಾಪಟಿಯ ಜೀವನಶೈಲಿಯಲ್ಲಿ ಅದೆಷ್ಟೋ ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ನಿರಂತರ ಆಯಾಸ. ರಾತ್ರಿ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿದರೂ ಸಹ, ಬೆಳಗ್ಗೆ ಏಳುವಾಗ ಮೈ ಕೈ ಎಲ್ಲಾ ನೋವು, ತೀವ್ರ ಸುಸ್ತು ಮತ್ತು ಇಡೀ ದಿನ ಕೆಲಸ ಮಾಡಲು ಸೋಮಾರಿತನ ಆವರಿಸಿಕೊಳ್ಳುತ್ತದೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ.
ಒಂದಿಡೀ ರಾತ್ರಿ ನಿದ್ದೆ ಮಾಡಿದ ಮೇಲೂ ದೇಹದಲ್ಲಿ ಎನರ್ಜಿ ಇಲ್ಲ ಎನಿಸಿದರೆ, ವೈದ್ಯಕೀಯ ಲೋಕದಲ್ಲಿ ಇದನ್ನು ‘ಸ್ಲೀಪ್ ಫ್ಯಾಟಿಗ್’ (Sleep Fatigue) ಎಂದು ಕರೆಯಲಾಗುತ್ತದೆ. ಇದು ಕೇವಲ ನಿಮ್ಮ ದೈನಂದಿನ ಕೆಲಸದ ಮೇಲಷ್ಟೇ ಅಲ್ಲದೇ, ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ದೇಹಕ್ಕೆ ಪೌಷ್ಟಿಕ ಆಹಾರ ಎಷ್ಟು ಅಗತ್ಯವೋ, ಅಷ್ಟೇ ಮುಖ್ಯ ಗುಣಮಟ್ಟದ ನಿದ್ದೆ ಕೂಡ. ಹಾಗಾದರೆ ಪೂರ್ತಿ ನಿದ್ದೆ ಮಾಡಿದರೂ ಆಯಾಸ ಕಾಡಲು ಅಸಲಿ ಕಾರಣಗಳೇನು? ಇಲ್ಲಿವೆ ನೋಡಿ ಪ್ರಮುಖ ಮಾಹಿತಿ.
ಗಾಢ ನಿದ್ರೆಗೆ ಭಂಗ ತರುವ 5 ಪ್ರಮುಖ ಆರೋಗ್ಯ ಸಮಸ್ಯೆಗಳು
ಸ್ಲೀಪ್ ಅಪ್ನಿಯ (Sleep Apnea):
ಬೆಳಗ್ಗಿನ ಸುಸ್ತಿಗೆ ಇದು ಅತ್ಯಂತ ಮುಖ್ಯ ಕಾರಣ. ನಿದ್ದೆ ಮಾಡುವಾಗ ಗಂಟಲಿನ ವಾಯುನಾಳಗಳು ತಾತ್ಕಾಲಿಕವಾಗಿ ಬ್ಲಾಕ್ ಆಗುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಈ ವೇಳೆ ಮೆದುಳು ತಕ್ಷಣವೇ ಎಚ್ಚರಗೊಳ್ಳುವಂತೆ ಸಿಗ್ನಲ್ ನೀಡುತ್ತದೆ. ನಮಗರಿವಿಲ್ಲದೆಯೇ ರಾತ್ರಿಯಿಡೀ ಈ ಪ್ರಕ್ರಿಯೆ ಪದೇ ಪದೇ ನಡೆಯುವುದರಿಂದ, ದೇಹಕ್ಕೆ ಸಿಗಬೇಕಾದ ಆಳವಾದ ನಿದ್ದೆ (Deep Sleep) ಸಿಗದೇ ವಂಚಿತವಾಗುತ್ತದೆ.
ಇನ್ಸೊಮ್ನಿಯ ಅಥವಾ ನಿದ್ರಾಹೀನತೆ:
ಈ ತೊಂದರೆ ಇರುವವರಿಗೆ ಹಾಸಿಗೆಗೆ ವಾchoice ಗ ತಕ್ಷಣ ನಿದ್ದೆ ಬರುವುದಿಲ್ಲ. ಒಂದು ವೇಳೆ ನಿದ್ದೆ ಬಂದರೂ ಮಧ್ಯರಾತ್ರಿಯಲ್ಲಿ ಪದೇ ಪದೇ ಎಚ್ಚರವಾಗುತ್ತದೆ. ಇದರಿಂದಾಗಿ ನಿದ್ದೆಯ ಒಟ್ಟು ಅವಧಿ ಪೂರ್ಣಗೊಂಡಂತೆ ಕಂಡರೂ, ಬಿಟ್ ಬೈ ಬಿಟ್ ನಿದ್ದೆಯಾಗುವುದರಿಂದ ದೇಹಕ್ಕೆ ಯಾವುದೇ ವಿಶ್ರಾಂತಿ ದೊರೆಯುವುದಿಲ್ಲ.
ಮಾನಸಿಕ ಒತ್ತಡ ಮತ್ತು ಆತಂಕ:
ಖಿನ್ನತೆ (Depression) ಹಾಗೂ ಅತಿಯಾದ ಆತಂಕ (Anxiety) ಮನುಷ್ಯನ ಶಕ್ತಿಯನ್ನು ಸಂಪೂರ್ಣವಾಗಿ ಹೀರಿಬಿಡುತ್ತವೆ. ಮನಸ್ಸಿನಲ್ಲಿ ಏನೋ ಒಂಥರಾ ಆತಂಕವಿದ್ದಾಗ ಮೆದುಳು ಯಾವಾಗಲೂ ಅಲರ್ಟ್ ಮೋಡ್ನಲ್ಲೇ ಇರುತ್ತದೆ. ಪರಿಣಾಮವಾಗಿ ದೇಹ ಮತ್ತು ಮನಸ್ಸು ರಿಲ್ಯಾಕ್ಸ್ ಆಗಲು ಸಾಧ್ಯವಾಗುವುದೇ ಇಲ್ಲ.
ದೀರ್ಘಕಾಲದ ಕಾಯಿಲೆಗಳ ಪ್ರಭಾವ:
ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ ಹಾಗೂ ಶ್ವಾಸಕೋಶದ ತೊಂದರೆ ಇರುವವರಲ್ಲಿ ಈ ಸುಸ್ತು ಜಾಸ್ತಿ. ದೇಹದಲ್ಲಿ ಸದಾ ಇರುವ ನೋವು, ಉಸಿರಾಟದ ತೊಂದರೆ ಅಥವಾ ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾದ ಪರಿಸ್ಥಿತಿ ನಿದ್ದೆಯನ್ನು ಹಾಳುಗೆಡವುತ್ತದೆ.
ಹೈಪರ್ಸೊಮ್ನಿಯ (Hypersomnia):
ಇದು ವಿಚಿತ್ರವಾದ ಸ್ಥಿತಿ. ಇದರಲ್ಲಿ ವ್ಯಕ್ತಿ ರಾತ್ರಿ ಎಷ್ಟು ಗಂಟೆ ಮಲಗಿದರೂ ಸಾಲುವುದಿಲ್ಲ. ಹಗಲು ಹೊತ್ತಿನಲ್ಲೂ ಅತಿಯಾದ ನಿದ್ದೆ ಮತ್ತು ತೂಕಡಿಕೆ ಕಾಡುತ್ತಲೇ ಇರುತ್ತದೆ. ಮೆದುಳು ನಿದ್ದೆಯ ಮೂಡ್ನಿಂದ ಆಕ್ಟಿವ್ ಮೂಡ್ಗೆ ಬದಲಾಗಲು ಕಷ್ಟಪಡುವಾಗ ಈ ಸಮಸ್ಯೆ ಎದುರಾಗುತ್ತದೆ.
ನಿಮ್ಮ ಈ ಕೆಟ್ಟ ಅಭ್ಯಾಸಗಳೂ ಕಾರಣವಿರಬಹುದು!
ಲೇಟ್ ನೈಟ್ ಪಾರ್ಟಿ & ಹೆವಿ ಫುಡ್: ರಾತ್ರಿ ತಡವಾಗಿ ಮಸಾಲೆ ಪದಾರ್ಥಗಳನ್ನು ತಿನ್ನುವುದು ಹಾಗೂ ಮದ್ಯಪಾನ ಮಾಡುವುದು ನಿದ್ದೆಯ ಶತ್ರುಗಳು.
ಗ್ಯಾಜೆಟ್ಸ್ ಅಡಿಕ್ಷನ್: ಮಲಗುವ ಮುನ್ನ ಮೊಬೈಲ್ ಸ್ಕ್ರಾಲ್ ಮಾಡುವುದು ಅಥವಾ ಲ್ಯಾಪ್ಟಾಪ್ ನೋಡುವುದರಿಂದ ಅದರಿಂದ ಹೊರಬರುವ ಬ್ಲೂ ಲೈಟ್ ನಿದ್ದೆಯ ಹಾರ್ಮೋನ್ಗಳನ್ನು ಕೆಡಿಸುತ್ತದೆ.
ಅಸ್ತವ್ಯಸ್ತ ದಿನಚರಿ: ಪ್ರತಿದಿನ ಒಂದೊಂದು ಟೈಮ್ಗೆ ಮಲಗುವುದರಿಂದ ದೇಹದ ಆಂತರಿಕ ಗಡಿಯಾರ (Biological Clock) ಗೊಂದಲಕ್ಕೀಡಾಗುತ್ತದೆ.
ದೇಹಕ್ಕೆ ನೀರಿಲ್ಲದಿರುವುದು: ದಿನವಿಡೀ ಕಡಿಮೆ ನೀರು ಕುಡಿಯುವುದು, ಪೌಷ್ಟಿಕಾಂಶದ ಕೊರತೆ ಮತ್ತು ದೈಹಿಕ ಶ್ರಮ ಇಲ್ಲದಿರುವುದು ಕೂಡ ದೇಹವನ್ನು ಜಡವಾಗಿಸುತ್ತದೆ.
ತಜ್ಞರ ಪ್ರಮುಖ ಕಿವಿಮಾತು: ಒಂದು ವೇಳೆ ನಿಮಗೂ ನಿರಂತರವಾಗಿ ಈ ರೀತಿಯ ಆಯಾಸ ಕಂಡುಬರುತ್ತಿದ್ದರೆ ಅದನ್ನು ಸಾಮಾನ್ಯ ಸುಸ್ತು ಎಂದು ನಿರ್ಲಕ್ಷಿಸಬೇಡಿ. ಮೊದಲು ನಿಮ್ಮ ಲೈಫ್ಸ್ಟೈಲ್ ಬದಲಾಯಿಸಿಕೊಳ್ಳಿ. ಆದರೂ ಸಮಸ್ಯೆ ಸರಿಯಾಗದಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ.
ಉತ್ತಮ ಆರೋಗ್ಯಕ್ಕೆ ನೆಮ್ಮದಿಯ ನಿದ್ದೆ ಅತಿ ಅಗತ್ಯ; ಹೀಗಾಗಿ ಇಂದಿನಿಂದಲೇ ನಿಮ್ಮ ಮಲಗುವ ಅಭ್ಯಾಸವನ್ನು ಸುಧಾರಿಸಿಕೊಂಡು ಲವಲವಿಕೆಯಿಂದಿರಿ.








