ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದಿನ ಸ್ಮಾರ್ಟ್ ಯುಗದಲ್ಲಿ ಹೆಚ್ಚಿನ ಜನರು ಸ್ಮಾರ್ಟ್ಫೋನ್ (Smartphone) ಮೂಲಕವೇ ಅರ್ಧ ಕೆಲಸ ಮುಗಿಸಿಬಿಡುತ್ತಾರೆ. ಅದರಲ್ಲೂ ಆನ್ಲೈನ್ ಪೇಮೆಂಟ್ ವಿಚಾರಕ್ಕೆ ಬರುವುದಾದರೆ ಕ್ಯಾಶ್ ಕೊಟ್ಟು ಏನಾದರು ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆ.
ಬಹುತೇಕರು ಮೊಬೈಲ್ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ, ಪೇಟಿಯಂ ಆ್ಯಪ್ ಇನ್ಸ್ಟಾಲ್ ಮಾಡಿ ಅದರ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ, ಒಂದುವೇಳೆ ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ, ಎಲ್ಲಾದರು ಕಳ್ಳತನವಾದರೆ ಏನು ಗತಿ?, ಈ ಸಂದರ್ಭ ಮೊಬೈಲ್ನಲ್ಲಿದ್ದ ಫೋನ್ ಪೇ, ಗೂಗಲ್ ಪೇ (Google Pay) ಅಕೌಂಟ್ ಅನ್ನು ಏನು ಮಾಡುವುದು. ಈ ರೀತಿಯ ಗೊಂದಲ ಅನೇಕರಿಗೆ ಇರಬಹುದು. ಹೀಗಾದಾಗ ನಿಮ್ಮ ಈ ಅಕೌಂಟ್ ಅನ್ನು ಯಾವರೀತಿ ಸುರಕ್ಷಿತವಾಗಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಯುಪಿಐ ಆ್ಯಪ್ಗಳಲ್ಲಿ ನೀವು ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿರುತ್ತೀರಿ. ಇದರಲ್ಲಿ ಸಾಕಷ್ಟು ಹಣ ಕೂಡ ಇರಬಹುದು. ಒಂದುವೇಳೆ ನಿಮ್ಮ ಮೊಬೈಲ್ ಕಳೆದು ಹೋದಾಗ ಅಥವಾ ಕಳುವಾದಾಗ ಕೆಲ ಟ್ರಿಕ್ ಉಪಯೋಗಿಸಿ ಅವರು ಯುಪಿಐ ಆ್ಯಪ್ ಓಪನ್ ಮಾಡಿ ಹಣವನ್ನು ದೋಚುವ ಸಾಧ್ಯತೆಗಳಿರುತ್ತದೆ. ಇದಕ್ಕಾಗಿ ನಿಮ್ಮ ಫೋನ್ ಕಳೆದು ಹೋಯಿತು ಎಂದ ಕೂಡಲೇ ಮೊದಲು ನಿಮ್ಮ ಯುಪಿಐ ಅಕೌಂಟ್ ಅನ್ನು ಬ್ಲಾಕ್ ಮಾಡಿ.
ಪೇಟಿಯಂ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:
- ಮೊದಲಿಗೆ Paytm ಪೇಮೆಂಟ್ಸ್ ಬ್ಯಾಂಕ್ ಸಹಾಯವಾಣಿ 01204456456 ಗೆ ಕರೆ ಮಾಡಿ.
- ಇದರಲ್ಲಿ “ಕಳೆದುಹೋದ ಫೋನ್” ಆಯ್ಕೆಯನ್ನು ಆರಿಸಿ.
- ನಂತರ “ಬೇರೆ ಸಂಖ್ಯೆಯನ್ನು ನಮೂದಿಸಿ” ಆಯ್ಕೆಮಾಡಿ ಮತ್ತು ನಿಮ್ಮ ಕಳೆದುಹೋದ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
- ಈಗ ಎಲ್ಲ ಡಿವೈಸ್ ಅನ್ನು ಲಾಗ್ ಔಟ್ ಮಾಡುವ ಆಯ್ಕೆ ಒತ್ತಿ.
- ಹಾಗೆಯೆ Paytm ವೆಬ್ಸೈಟ್ಗೆ ಹೋಗಿ ಮತ್ತು 24×7 ಸಹಾಯವನ್ನು ಆಯ್ಕೆಮಾಡಿ.
- ‘Report a Fraud’ ಆಯ್ಕೆಮಾಡಿ ಮತ್ತು ಅಲ್ಲಿ ಕಾಣಿಸುವ ಕ್ಯಾಟಗರಿಯನ್ನು ಸೆಲೆಕ್ಟ್ ಮಾಡಿರಿ.
- ಈಗ ಪುಟದ ಕೆಳಭಾಗದಲ್ಲಿ ಲಭ್ಯವಿರುವ ‘Message Us’ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
- ಇಲ್ಲಿ ನೀವು, ಇದು ನನ್ನದೇ ಪೇಟಿಯಂ ಖಾತೆ ಎಂಬುದಕ್ಕೆ ಪುರಾವೆಯನ್ನು ನೀಡಬೇಕು. ಅದು Paytm ಖಾತೆಯ ವಹಿವಾಟುಗಳೊಂದಿಗೆ ನಡೆದ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಆಗಿರಬಹುದು ಅಥವಾ Paytm ಖಾತೆಯ ವಹಿವಾಟಿಗೆ ದೃಢೀಕರಣ ಇಮೇಲ್ ಅಥವಾ SMS ಆಗಿರಬಹುದು.
- ಬಳಿಕ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಹಾಗೂ Paytm ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ.
ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:
- ಗೂಗಲ್ ಪೇ ಬಳಕೆದಾರರು 18004190157ಗೆ ಕರೆ ಮಾಡಿ.
- ಇದು ಕಸ್ಟಮರ್ ಸರ್ವಿಸ್ ನಂಬರ್ ಆಗಿದ್ದು ಅವರು ಸಲಹೆ ನೀಡಿದ ರೀತಿ ನಡೆದುಕೊಳ್ಳಬೇಕು.
ಫೋನ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:
- ಫೋನ್ ಪೇ ಬಳಕೆದಾರರು 08068727374 ಅಥವಾ 02268727374 ನಂಬರ್ಗೆ ಕರೆ ಮಾಡಿ.
- ಅಲ್ಲಿ ನಿಮಗೆ ಸಂಬಂಧಿಸಿದ ನಂಬರ್ ಅನ್ನು ಆಯ್ಕೆ ಮಾಡಿ.
- ಬಳಿಕ ಖಚಿತ ಪಡಿಸಿಕೊಳ್ಳಲು ನಿಮ್ಮ ಫೋನ್ ನಂಬರ್ಗೆ OTP ಸೆಂಡ್ ಆಗುತ್ತದೆ.
- ಆಗ ನಾನು ಯಾವುದೇ OTP ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ.
- ಸಿಮ್ ಕಳೆದು ಹೋಗಿದೆ ಅಥವಾ ಮೊಬೈಲ್ ಕಳೆದು ಹೋಗಿದೆ ಎಂಬ ಆಯ್ಕೆ ಸೆಲೆಕ್ಟ್ ಮಾಡಿ.
- ನಂತರ ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ಸೇರಿದಂತೆ ಕೆಲ ದಾಖಲಾತಿ ನೀಡಿದ ಬಳಿಕ ಫೋನ್ ಪೇ ಅಕೌಂಟ್ ಬ್ಲಾಕ್ ಆಗುತ್ತದೆ.