ಪುಣೆ: ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ‘ಜಾಲಿ ಎಲ್ ಎಲ್ ಬಿ 3’ ಚಿತ್ರದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಪುಣೆ ಸಿವಿಲ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಚಿತ್ರದ ಟೀಸರ್ ವಕೀಲರು ಮತ್ತು ನ್ಯಾಯಾಧೀಶರನ್ನು ಅಗೌರವದಿಂದ ಚಿತ್ರಿಸಿದೆ ಎಂದು ಆರೋಪಿಸಿ ವಕೀಲರಾದ ವಾಜೀದ್ ಖಾನ್ (ಬಿಡ್ಕರ್) ಮತ್ತು ಗಣೇಶ್ ಮಾಸ್ಕೆ ಅರ್ಜಿ ಸಲ್ಲಿಸಿದ್ದರು.
ಸೃಜನಶೀಲ ಸ್ವಾತಂತ್ರ್ಯದ ಸೋಗಿನಲ್ಲಿ, ನಟರು ಮತ್ತು ಚಲನಚಿತ್ರ ನಿರ್ಮಾಪಕರು ಅಸಭ್ಯ ಹಾಸ್ಯವನ್ನು ಬಳಸುವ ಮೂಲಕ ಕಾನೂನು ವೃತ್ತಿಯನ್ನು ಅಣಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ 12ನೇ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜೆ.ಜಿ.ಪವಾರ್ ಅವರು, ಆಗಸ್ಟ್ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟರಿಗೆ ಹಾಗೂ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಅರ್ಜಿದಾರರು ಚಿತ್ರದ ಬಿಡುಗಡೆಗೆ ತಡೆ ಆದೇಶವನ್ನು ಕೋರಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ವಕೀಲರ ಬ್ಯಾಂಡ್ಗಳನ್ನು ಧರಿಸಿ ಚಿತ್ರದ ಪ್ರಚಾರವನ್ನು ಟೀಸರ್ನಲ್ಲಿ ತೋರಿಸಿದ ನಂತರ ವಿವಾದ ಉದ್ಭವಿಸಿತು, ಇದು ವೃತ್ತಿಯ ಘನತೆಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸಿದರು.
“ಈ ಚಿತ್ರದಲ್ಲಿ ಎಲ್ಲಾ ವಕೀಲರು ನ್ಯಾಯಾಧೀಶರನ್ನು ‘ಮಾಮು’ ಎಂದು ಕರೆಯುತ್ತಾರೆ. ಇದು ನ್ಯಾಯಾಂಗಕ್ಕೆ ಮಾಡಿದ ಅವಮಾನ” ಎಂದು ವಜೀದ್ ಖಾಡ್ ತಿಳಿಸಿದರು.