ಬೆಂಗಳೂರು : ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರಲ್ಲಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಕಡ್ಡಾಯ ವಯೋಮಿತಿಯ ನಿಯಮದಲ್ಲಿ 60 ದಿನಗಳ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಈ ಮಾಹಿತಿ ನೀಡಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 20ರ ಪ್ರಕಾರ ಈ ವಿನಾಯಿತಿಯನ್ನು ಕಾಯಂ ಆಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.ಆಗಸ್ಟ್ 1ಕ್ಕೆ ಆರು ವರ್ಷ ತುಂಬುವ ಮಗುವಿಗೂ ಇನ್ನು ಮುಂದೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶವಿರುತ್ತದೆ.ಈ ಹಿಂದೆ ಜೂನ್ 1ಕ್ಕೆ ಆರು ವರ್ಷ ಪೂರ್ತಿಯಾಗುವುದು ಕಡ್ಡಾಯವಾಗಿತ್ತು. ಈಗ ಈ ನಿಯಮದಲ್ಲಿ 60 ದಿನಗಳ ಸಡಿಲಿಕೆ ನೀಡಲಾಗಿದೆ.
ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳಿಗೂ ಅನ್ವಯ
ಈ ಹೊಸ ನಿಯಮವು ಕೇವಲ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮಾತ್ರವಲ್ಲದೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಿಗೂ ಅನ್ವಯವಾಗಲಿದೆ.
ಪೋಷಕರಿಗೆ ನಿರಾಳ:
ಜೂನ್ 1ರ ಕಟ್ಟುನಿಟ್ಟಿನ ನಿಯಮದಿಂದಾಗಿ ಕೆಲವು ದಿನಗಳ ಅಂತರದಲ್ಲಿ ಆರು ವರ್ಷ ಪೂರೈಸದ ಮಕ್ಕಳು ಒಂದು ವರ್ಷ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಈ ಸಡಿಲಿಕೆಯಿಂದಾಗಿ ಎಲ್‌ಕೆಜಿ, ಯುಕೆಜಿ ಹಂತದಲ್ಲೂ ಉಂಟಾಗುತ್ತಿದ್ದ ಪ್ರವೇಶಾತಿ ತೊಂದರೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.








