ನವದೆಹಲಿ : ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ 18,000 ಕೋಟಿ ಬರ ಪರಿಹಾರ ಅನುದಾನದ ಹುಷಾರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿತ್ತು ಇದೀಗ ಇದೆ ವಿಚಾರವಾಗಿ ಪಕ್ಕದ ತಮಿಳುನಾಡು ರಾಜ್ಯ ಸರ್ಕಾರ ನೆರೆ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ತಿಳಿದು ಬಂದಿದೆ.
ಅನುದಾನ ಹಾಗೂ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಧ್ವನಿ ಎತ್ತಿರುವ ದಕ್ಷಿಣ ರಾಜ್ಯಗಳು ಇದೀಗ ಕಾನೂನು ಹೋರಾಟವನ್ನು ತೀವ್ರಗೊಳಿಸಿವೆ.ಪ್ರಕೃತಿ ವಿಕೋಪಕ್ಕೆ ಕೇಂದ್ರ ಸರ್ಕಾರ ತನಗೆ ಬರಬೇಕಾದ ಅನುದಾನವನ್ನು ತಡೆಹಿಡಿದಿದೆ ಎಂದು ದೂರಿದ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಸಂವಿಧಾನದ 131ನೇ ಪರಿಚ್ಛೇದದ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ.ಇದರಡಿ ಕೇಂದ್ರ- ರಾಜ್ಯಗಳ ನಡುವೆ ಕಾನೂನು ಸಮರ ಉಂಟಾದಾಗ ನ್ಯಾಯಾಲ ಯದ ಮೆಟ್ಟಿಲೇರುವ ಅವಕಾಶವಿದೆ.
ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾಗೂ ಮಿಚೌಂಗ್ ಚಂಡಮಾರುತದಿಂದಾದ ಹಾನಿಗೆ 37 ಸಾವಿರ ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ಕಳೆದ ಡಿಸೆಂಬರ್ನಲ್ಲಿ ಮಿಚೌಂಗ್ ಚಂಡಮಾರುತದಿಂದಾಗಿ 19,692 ಕೋಟಿ ರು. ನಷ್ಟವಾಗಿದೆ. ದಕ್ಷಿಣದ ಜಿಲ್ಲೆಗಳಲ್ಲಿ ಕಂಡು ಕೇಳರಿಯದ ಮಳೆಯಿಂದಾಗಿ 18 ಸಾವಿರಕೋಟಿ ರು. ಹಾನಿಯಾಗಿದೆ. ಹೀಗಾಗಿ ಈ ಪರಿಹಾರ ಕೊಡಿಸಬೇಕು. ಮಧ್ಯಂತರ ಪರಿಹಾ ರವಾಗಿ ₹2000 ಕೋಟಿ ಬಿಡುಗಡೆ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದೆ.
ತನಗೆ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಮಾ.23ರಂದು ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ತನ್ಮೂಲಕ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಇನ್ನೊಂದೆಡೆ ಕೇರಳ ಸರ್ಕಾರ ಕೂಡಾ, ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದೆ.