ಬಲೋತ್ರಾ (ರಾಜಸ್ಥಾನ): ನಾಳೆ (ಏಪ್ರಿಲ್ 21, 2026) ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾಗಬೇಕಿದ್ದ ಪಚಪಾದ್ರದ ಎಚ್‌ಪಿಸಿಎಲ್ ರಾಜಸ್ಥಾನ ರಿಫೈನರಿಯ (HRRL) ಉದ್ಘಾಟನಾ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇಂದು ಮಧ್ಯಾಹ್ನ ರಿಫೈನರಿಯ ಪ್ರಮುಖ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡವೇ ಈ ನಿರ್ಧಾರಕ್ಕೆ ಕಾರಣವಾಗಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತವಾಗಿ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ರಿಫೈನರಿಯ ‘ಕ್ರೂಡ್ ಡಿಸ್ಟಿಲೇಷನ್ ಯೂನಿಟ್’ (CDU) ನಲ್ಲಿ ಇಂದು ಮಧ್ಯಾಹ್ನ ಸುಮಾರು 2:00 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಸುಮಾರು 35ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸತತ ಹೋರಾಟ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿವೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಸಚಿವಾಲಯದ ವಕ್ತಾರರು ಖಚಿತಪಡಿಸಿದ್ದಾರೆ.
ಇಂತಹ ಹೈ-ಪ್ರೊಫೈಲ್ ಉದ್ಘಾಟನೆಗೆ ಒಂದು ದಿನ ಮೊದಲೇ ಬೆಂಕಿ ಕಾಣಿಸಿಕೊಂಡಿರುವುದು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಲಾಗಿದ್ದು, ತಾಂತ್ರಿಕ ದೋಷ ಅಥವಾ ವಿಧ್ವಂಸಕ ಕೃತ್ಯವೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.








