ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್ ನೀಡಿ ಬಿಜೆಪಿ ಸೇರಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ಈಗ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ನೇರ ವಾಗ್ದಾಳಿ ಆರಂಭಿಸಿದ್ದಾರೆ. ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಕೇಜ್ರಿವಾಲ್ ಅವರಿಗೆ ಹಂಚಿಕೆಯಾಗಿರುವ ಹೊಸ ನಿವಾಸವನ್ನು ಬಿಜೆಪಿ ‘ಶೀಶ್ ಮಹಲ್ 2.0’ ಎಂದು ಕರೆದ ಬೆನ್ನಲ್ಲೇ, ಚಡ್ಡಾ ಅವರು ಈ ವಿವಾದವು ಪಕ್ಷದ ಪತನಕ್ಕೆ ಕಾರಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
“ನಾವು ಭಯದಿಂದ ಪಕ್ಷ ಬಿಟ್ಟಿದ್ದೇವೆ ಎಂದು ಎಎಪಿ ನಾಯಕರು ಹೇಳುತ್ತಿದ್ದಾರೆ. ಆದರೆ ನಾವು ಹೊರಬಂದಿದ್ದು ಭಯದಿಂದಲ್ಲ, ಬದಲಾಗಿ ಪಕ್ಷದ ಮೇಲಿನ ಅಸಹ್ಯ ಮತ್ತು ನಿರಾಶೆಯಿಂದ,” ಎಂದು ಚಡ್ಡಾ ಸ್ಪಷ್ಟಪಡಿಸಿದ್ದಾರೆ.
ಕೇಜ್ರಿವಾಲ್ ಅವರ ಹೊಸ ಬಂಗಲೆಯಲ್ಲಿ ಖಾಸಗಿ ಹಣ ಬಳಸಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಧ್ವನಿಗೂಡಿಸಿರುವ ಚಡ್ಡಾ, “ಮೊದಲ ಶೀಶ್ ಮಹಲ್ ವಿವಾದವೇ ದೆಹಲಿ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಈಗ ಅದರ ಎರಡನೇ ಭಾಗ (Part 2) ಮುನ್ನೆಲೆಗೆ ಬಂದಿದೆ,” ಎಂದು ಲೇವಡಿ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮೂಲ ಸಿದ್ಧಾಂತ ಮತ್ತು ಪ್ರಾಮಾಣಿಕತೆಯ ಇಮೇಜ್ ಈ ಐಷಾರಾಮಿ ಜೀವನದ ವಿವಾದಗಳಿಂದಾಗಿ ಸಂಪೂರ್ಣವಾಗಿ ಮಣ್ಣುಪಾಲಾಗಿದೆ ಎಂದು ಅವರು ಆರೋಪಿಸಿದ್ದಾರೆ.








