ಕಲಬುರಗಿ: ಪ್ರೀತಿ ಎಂಬುದು ಎಷ್ಟು ಸುಂದರವೋ, ಅದು ಮುರಿದುಬಿದ್ದಾಗ ಆಗುವ ನೋವು ಅಷ್ಟೇ ಭೀಕರ. ಪ್ರೀತಿಸಿದ ಹುಡುಗಿ ಕೈಕೊಟ್ಟಾಗ ಯುವಕನೊಬ್ಬ ತನ್ನ ಅಜ್ಜಿಯ ಮುಂದೆ ಕಣ್ಣೀರಿಡುತ್ತಾ ಮಗುವಿನಂತೆ ನೋವು ತೋಡಿಕೊಂಡಿರುವ ಹೃದಯಸ್ಪರ್ಶಿ ವಿಡಿಯೋವೊಂದು ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪ್ರೀತಿಸಿದ ಹುಡುಗಿಯಿಂದ ದೂರಾದ ನೋವು: ಮೂಲತಃ ಕಲಬುರಗಿಯವನಾದ ಮೌನೇಶ್ ಎಂಬ ಯುವಕ ಈ ವಿಡಿಯೋ ಹಂಚಿಕೊಂಡಿದ್ದಾನೆ. ತಾನು ಗಾಢವಾಗಿ ಪ್ರೀತಿಸಿದ ಯುವತಿ, “ನಮ್ಮ ಪ್ರೀತಿಯನ್ನು ಮನೆಯವರು ಒಪ್ಪುತ್ತಿಲ್ಲ” ಎಂಬ ಕಾರಣ ನೀಡಿ ಆತನಿಂದ ದೂರಾಗಿದ್ದಾಳೆ. ಪ್ರೀತಿಯಲ್ಲಿ ಸೋತ ಯುವಕ ಆಘಾತಕ್ಕೊಳಗಾಗಿ, ತನ್ನ ನೋವನ್ನು ತಡೆದುಕೊಳ್ಳಲಾಗದೆ ಅಜ್ಜಿಯ ಮೊರೆ ಹೋಗಿದ್ದಾನೆ.
ಅಜ್ಜಿಯ ಬಳಿ ಅಳಲು ತೋಡಿಕೊಂಡ ಮೊಮ್ಮಗ: ತನ್ನ ಇನ್‌ಸ್ಟಾಗ್ರಾಮ್ ಖಾತೆಯಾದ (m.k.bhai.mounesh) ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಯುವಕ ಅಜ್ಜಿಯ ಬಳಿ ಕುಳಿತು ಅಳುತ್ತಿದ್ದಾನೆ. “ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ, ಆಕೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಸಿಕ್ಕಾಪಟ್ಟೆ ಅಳು ಬರುತ್ತಿದೆ” ಎಂದು ಅಜ್ಜಿಯ ಮಡಿಲಲ್ಲಿ ಮಗುವಿನಂತೆ ಅತ್ತು ತನ್ನ ವಿರಹದ ವೇದನೆಯನ್ನು ಹೊರಹಾಕಿದ್ದಾನೆ. ಮೊಮ್ಮಗನ ಈ ಸ್ಥಿತಿಯನ್ನು ಕಂಡು ಅಜ್ಜಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು “ಪ್ರೀತಿ ಅಂದರೆ ಹೀಗೆ, ಕಷ್ಟಪಡಬೇಡ ಎಲ್ಲವೂ ಸರಿ ಹೋಗುತ್ತದೆ” ಎಂದು ಸಾಂತ್ವನ ಹೇಳುತ್ತಿದ್ದರೆ, ಇನ್ನು ಕೆಲವರು “ಹುಡುಗಿಯರು ಕೈಕೊಡುವುದು ಸಹಜ, ಇದಕ್ಕಾಗಿ ಸಮಯ ವ್ಯರ್ಥ ಮಾಡಬೇಡ, ಜೀವನದಲ್ಲಿ ಮುಂದೆ ಗುರಿ ತಲುಪು” ಎಂದು ಸಲಹೆ ನೀಡುತ್ತಿದ್ದಾರೆ.








