ಚಿಕ್ಕೋಡಿ: ಹೆತ್ತ ಮಗನೇ ಕಟುಕನಾದರೆ ಆ ತಾಯಿ ಯಾರಿಗೆ ತಾನೇ ನ್ಯಾಯ ಕೇಳಬೇಕು? ಸರ್ಕಾರದ ಉಚಿತ ಹಣದ ಆಸೆಗೆ ಬಿದ್ದ ಪುತ್ರನೊಬ್ಬ ವೃದ್ಧ ತಾಯಿಯ ಮೇಲೆಯೇ ಹಲ್ಲೆ ನಡೆಸಿ, ಆಕೆಯನ್ನು ಮನೆಯಿಂದ ಆಚೆ ಹಾಕಿರುವ ಮನಕಲಕುವ ಘಟನೆಯೊಂದು ರಾಯಬಾಗ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದ ನಿವಾಸಿಯಾದ ಸತ್ಯವ್ವಾ ಖಾಂಡೇಕರ (78 ವರ್ಷ) ಎಂಬ ವೃದ್ಧೆಯೇ ಸ್ವಂತ ಮಗನಿಂದ ಹಲ್ಲೆಗೆ ಒಳಗಾದ ದುರ್ದೈವಿ. ಸತ್ಯವ್ವಾ ಅವರ ಮಗ ಹಾಲಪ್ಪ ಖಾಂಡೇಕರ ಎಂಬಾತನೇ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿ. ತಾಯಿಗೆ ಸರ್ಕಾರದಿಂದ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ‘ಗೃಹಲಕ್ಷ್ಮಿ’ ಯೋಜನೆಯ ಮಾಸಿಕ ಹಣವನ್ನು ಈತ ಬಲವಂತವಾಗಿ ಕಸಿದುಕೊಳ್ಳುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಾಯಿಯ ಖಾತೆಯಲ್ಲಿದ್ದ ಉಳಿದ ನಗದು ಹಣವನ್ನೂ ದೋಚಿ, ಆಕೆಗೆ ಮನಬಂದಂತೆ ಥಳಿಸಿ ಮನೆಯಿಂದ ಹೊರಗಟ್ಟಿದ್ದಾನೆ ಎಂದು ನೊಂದ ತಾಯಿ ಕಣ್ಣೀರು ಹಾಕಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಾಲಪ್ಪ ಪ್ರತಿಕ್ರಿಯೆ ನೀಡಿದ್ದು,ನಾನು ತಾಯಿಗೆ ಹೊಡೆದಿಲ್ಲ” ಎಂದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಆದರೆ, ತಾಯಿಯನ್ನು ಈ ರೀತಿ ಬೀದಿಗೆ ತಳ್ಳಿದ ಪಾಪಿ ಮಗನ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೃದ್ಧೆಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








