ರಾಯಚೂರು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆದಿದೆ. ತನ್ನ ಪುತ್ರನ ಪತ್ನಿ, ಗರ್ಭಿಣಿ ಸೊಸೆಯನ್ನೇ ಮಾವನೊಬ್ಬ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವಂತ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಂತ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಗರ್ಭಿಣಿ ರೇಖಾ(25) ಎಂಬಾಕೆಯೇ ಮಾವನಿಂದ ಕೊಲೆಯಾದವರಾಗಿದ್ದಾರೆ. ರೇಖಾ ಎರಡು ದಿನಗಳ ಹಿಂದೆ ತವರಿಗೆ ಹೋಗಿದ್ದಳು. ಆ ಬಳಿಕ ಗಂಡನ ಮನೆಗೆ ವಾಪಾಸ್ ಆಗಿದ್ದಾಗ ಮನೆಯಲ್ಲಿ ಯಾರು ಇರಲಿಲ್ಲ.
ಕೆಲಸಕ್ಕೆ ಯಾರು ಮನೆಯಲ್ಲಿ ಇಲ್ಲ. ಕೆಲಸ ಮಾಡೋರು ಯಾರು. ನಾನು ಗರ್ಭಿಣಿ ಬೇರೆ. ಕೆಲಸ ಮಾಡೋದಕ್ಕೆ ಕಷ್ಟ. ವೈದ್ಯರು ಬೇಡವೆಂದು ತಿಳಿಸಿದ್ದಾರೆ ಎಂದಿದ್ದಾಳೆ. ಇದೇ ವಿಚಾರಕ್ಕೆ ಮಾವನೊಂದಿಗೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಗರ್ಭಿಣಿ ಸೊಸೆಯ ಮೇಲೆ ಮಾವ ಮಾರಣಾಂತಿಕವಾಗಿಯೂ ಹಲ್ಲೆ ಮಾಡಿದ್ದಾರೆ.
ಮಾವನ ರೌದ್ರಾವತಾರವನ್ನು ಕಂಡಂತ ಗರ್ಭಿಣಿ ರೇಖಾ ಮನೆಯಿಂದ ಹೊರ ಬಂದು ಅಕ್ಕಪಕ್ಕದವರ ಸಹಾಯಕ್ಕೆ ಕೂಗಿದ್ದಾಳೆ. ಅಲ್ಲಿಗೆ ಬಂದಂತ ರೇಖಾ ಮಾವ ಆಕೆಯ ಮೇಲೆ ರಾಕ್ಷಸನಂತೆ ಎರಗಿ, ಆಕೆಯ ಕತ್ತನ್ನು ಚಾಕುವಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತೀರ್ವ ರಕ್ತಸ್ತ್ರಾವದಿಂದ ನಾಲ್ಕು ತಿಂಗಳ ಗರ್ಭಿಣಿ ರೇಖಾ ಮನೆಯ ಮುಂದೆಯೇ ನರಳಿ ನರಳಿ ಸಾವನ್ನಪ್ಪಿದ್ದಾಳೆ.
ಈ ವಿಷಯ ತಿಳಿದಂತ ಕವಿತಾಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ನಾಲ್ಕು ತಿಂಗಳ ಗರ್ಭಿಣಿ ರೇಖಾ ಕೊಲೆಗೈದ ಪ್ರಕರಣದಲ್ಲಿ ಮಾವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.








