ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಸಹಿಯಾದ ತಿಳುವಳಿಕಾ ಒಪ್ಪಂದದ (MoU) ನಿಯಮಗಳನ್ನು ಅಮೆರಿಕ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. “ಇದೇ ಪರಿಸ್ಥಿತಿ ಮುಂದುವರಿದರೆ ಅಮೆರಿಕ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಅಜೀಜಿ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಡುವೆ ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಯುದ್ಧದ ಪರಿಸ್ಥಿತಿಯನ್ನು ತಿಳಿಗೊಳಿಸಲು 14 ಅಂಶಗಳ ಮಹತ್ವದ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಮೊದಲ ನಿಯಮದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ತಕ್ಷಣವೇ ಮತ್ತು ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು.
ಆದರೆ, ಅಮೆರಿಕವು ಈ ಒಪ್ಪಂದದ ಮೊದಲ ನಿಯಮವನ್ನೇ ಜಾರಿಗೆ ತರಲು ವಿಫಲವಾಗಿದೆ, ಇದು ಇರಾನ್ ಜನರ ನಂಬಿಕೆಗೆ ದ್ರೋಹ ಬಗೆದಂತಾಗಿದೆ ಎಂದು ಇರಾನ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆಯು ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಪಡೆಗಳ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ರೇಲ್ನ ಟ್ಯಾಂಕ್ ಬೆಟಾಲಿಯನ್ ಕಮಾಂಡರ್ ಸೇರಿದಂತೆ ನಾಲ್ಕು ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಪಡೆಗಳು ಲೆಬನಾನ್ನ ಬೆಕಾ ಕಣಿವೆಯಲ್ಲಿರುವ ಹೆಜ್ಬುಲ್ಲಾ ನೆಲೆಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿವೆ. ಈ ಹೊಸ ದಾಳಿಗಳ ಬೆನ್ನಲ್ಲೇ ಇರಾನ್, ಅಮೆರಿಕದ ವಿರುದ್ಧ ಹರಿಹಾಯ್ದಿದೆ. ಇಸ್ರೇಲ್ ದಾಳಿಯನ್ನು ತಡೆಯಲು ಅಮೆರಿಕ ವಿಫಲವಾಗಿದೆ ಎಂಬುದು ಇರಾನ್ ವಾದವಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, “ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯುದ್ಧವನ್ನು ಕೊನೆಗೊಳಿಸುವ ಸಂಪೂರ್ಣ ಜವಾಬ್ದಾರಿ ಅಮೆರಿಕದ ಮೇಲಿದೆ. ಒಪ್ಪಂದದ ಯಾವುದೇ ಉಲ್ಲಂಘನೆಗೆ ಅಮೆರಿಕವೇ ನೇರ ಹೊಣೆಯಾಗುತ್ತದೆ” ಎಂದು ಹೇಳಿದ್ದಾರೆ. ಇರಾನ್ ಸಂಸದ ಇಬ್ರಾಹಿಂ ಅಜೀಜಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ, “ಒಪ್ಪಂದದ ಉಲ್ಲಂಘನೆಗೆ ಇರಾನ್ ಅತ್ಯಂತ ಬುದ್ಧಿವಂತಿಕೆಯಿಂದ ಕೂಡಿದ ಮತ್ತು ಪ್ರಬಲವಾದ ತಿರುಗೇಟು ನೀಡಲಿದೆ, ನಮ್ಮ ಈ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಹೆಜ್ಬುಲ್ಲಾ ನಡುವೆ ಮತ್ತೊಂದು ಹೊಸ ಕದನ ವಿರಾಮ ಘೋಷಣೆಯಾಗಿದ್ದರೂ, ಇರಾನ್ ಮತ್ತು ಅಮೆರಿಕ ನಡುವಿನ ಈ ವಾಕ್ಸಮರವು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ








