ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಭಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ (TMC) ಮುಖಂಡ ಜಹಾಂಗೀರ್ ಖಾನ್ ಅವರ ಪತ್ನಿ ಸರಿನಾ ಬೀಬಿ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತನ್ನ ಪತಿಯನ್ನು ಕಸ್ಟಡಿಯಿಂದ ಬಿಡಿಸಲು ಫಾಲ್ಟಾ ಪೊಲೀಸ್ ಠಾಣೆಯ ಮೇಲೆ ನಡೆದ ಹಿಂಸಾತ್ಮಕ ದಾಳಿಯ ಹಿಂದೆ ಸರಿನಾ ಬೀಬಿ ಪ್ರಮುಖ ಕೈವಾಡ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಯುಧ ಕಾಯ್ದೆಯಡಿ ಪ್ರಕರಣ ದಾಖಲು
ಪೊಲೀಸ್ ಅಧಿಕಾರಿಗಳ ಪ್ರಕಾರ, ಸರಿನಾ ಬೀಬಿ ವಿರುದ್ಧ ಆಯುಧ ಕಾಯ್ದೆ ಮತ್ತು ಸ್ಫೋಟಕಗಳ ಕಾಯ್ದೆಯಡಿ ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್ ಠಾಣೆಯ ಮೇಲಿನ ದಾಳಿಯು “ಪೂರ್ವ ನಿಯೋಜಿತ ಪಿತೂರಿ” ಆಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಬಲಿಗರನ್ನು ಒಟ್ಟುಗೂಡಿಸುವಲ್ಲಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ಸರಿನಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ನೇಪಾಳ ಗಡಿಯಲ್ಲಿ ಸಿಕ್ಕಿಬಿದ್ದಿದ್ದ ‘ಪುಷ್ಪ’ ಜಹಾಂಗೀರ್ ಖಾನ್!
ಕೆಲ ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (STF) ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ಜಹಾಂಗೀರ್ ಖಾನ್ನನ್ನು ನೇಪಾಳ ಗಡಿಯ ಬಳಿ ಬಂಧಿಸಿತ್ತು. ಚುನಾವಣಾ ಪ್ರಚಾರದ ವೇಳೆ ಜಹಾಂಗೀರ್ ಖಾನ್ ತನ್ನನ್ನು ತಾವು ಜನಪ್ರಿಯ ‘ಪುಷ್ಪ’ ಚಿತ್ರದ ನಾಯಕನಿಗೆ ಹೋಲಿಸಿಕೊಂಡು ಭಾರಿ ಸುದ್ದಿಯಾಗಿದ್ದರು. ಚುನಾವಣಾ ವೀಕ್ಷಕರಾಗಿ ಬಂದಿದ್ದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರ ದಾಳಿಯ ವಿರುದ್ಧ ಕಿಡಿಕಾರಿದ್ದ ಜಹಾಂಗೀರ್, “ಅವರು ಸಿಂಗಂ ಆದರೆ, ನಾನು ಪುಷ್ಪ… ಝುಕೇಗಾ ನಹೀ” (ಬಗ್ಗುವುದಿಲ್ಲ) ಎಂದು ಸವಾಲು ಹಾಕಿದ್ದರು.
ಸುವೇಂದು ಅಧಿಕಾರಿ ಎಚ್ಚರಿಕೆ ಮತ್ತು ಬಿಜೆಪಿಯ ಐತಿಹಾಸಿಕ ಜಯ
ಫಾಲ್ಟಾ ಕ್ಷೇತ್ರದಲ್ಲಿ ನಡೆದ ಮರುದಿನದ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಈ ಸೋಕಾಲ್ಡ್ ಪುಷ್ಪನ ಜವಾಬ್ದಾರಿ ನನ್ನದು” ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.
ಇವಿಎಂ ಯಂತ್ರಗಳಲ್ಲಿನ ಅಕ್ರಮಗಳ ಕಾರಣದಿಂದಾಗಿ ಫಾಲ್ಟಾ ಕ್ಷೇತ್ರದಲ್ಲಿ ಮೇ 21 ರಂದು ಮರುಚುನಾವಣೆ ನಡೆದಿತ್ತು. ಆದರೆ ಮತದಾನಕ್ಕೆ ಕೇವಲ 48 ಗಂಟೆಗಳ ಮೊದಲು ಜಹಾಂಗೀರ್ ಖಾನ್ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಮೇ 24 ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಅವರು 1,09,021 ಮತಗಳ ದಾಖಲೆಯ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದರು.
ಚುನಾವಣಾ ಫಲಿತಾಂಶದ ನಂತರ ತಲೆಮರೆಸಿಕೊಂಡಿದ್ದ ಜಹಾಂಗೀರ್ ಖಾನ್ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಸದ್ಯ ಅವರ ಬೆನ್ನಲ್ಲೇ ಪತ್ನಿ ಸರಿನಾ ಬೀಬಿ ಕೂಡ ಪೊಲೀಸ್ ಅತಿಥಿಯಾಗಿದ್ದಾರೆ.








