ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ತಮ್ಮ ಹಳೆಯ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ಗೆ (DC) ಮರಳಲು ಸಜ್ಜಾಗಿದ್ದಾರೆ ಎಂಬ ವರದಿಗಳು ಬಂದಿವೆ. ಲಕ್ನೋ ಸೂಪರ್ ಜೈಂಟ್ಸ್ (LSG) ಪರ 2026ರ ಐಪಿಎಲ್ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಬೆನ್ನಲ್ಲೇ ಪಂತ್ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಕ್ರಿಕ್ಬಜ್ ವರದಿಯ ಪ್ರಕಾರ, ಪಂತ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿಯು ಲಕ್ನೋ ತಂಡದೊಂದಿಗೆ ಮಾತುಕತೆ ಆರಂಭಿಸಿದೆ. ಈ ದೊಡ್ಡ ಟ್ರೇಡಿಂಗ್ ಒಪ್ಪಂದದ ಭಾಗವಾಗಿ ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಡೆಲ್ಲಿಯಿಂದ ಲಕ್ನೋ ತಂಡಕ್ಕೆ ಲಗ್ಗೆ ಇಡಲಿದ್ದಾರೆ. ಇದು ಇಬ್ಬರೂ ಆಟಗಾರರಿಗೆ ತಮ್ಮ ತವರು ನೆಲಕ್ಕೆ ಮರಳುವ ಅಪರೂಪದ ಅವಕಾಶವಾಗಲಿದೆ. ಏಕೆಂದರೆ ಪಂತ್ ಅವರು ದೆಹಲಿ ಪರ ಹಾಗೂ ಕುಲದೀಪ್ ಉತ್ತರ ಪ್ರದೇಶದ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಬಿಗ್ ಟ್ರೇಡ್ಗೆ ಸಂಬಂಧಿಸಿದ ದಾಖಲೆಗಳು ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅನುಮೋದನೆಗಾಗಿ ಕಾಯುತ್ತಿವೆ ಎಂದು ಹೇಳಲಾಗಿದೆ.
ಇನ್ನು ಈ ಟ್ರೇಡ್ ಪ್ರಕ್ರಿಯೆಯ ಭಾಗವಾಗಿ ರಿಷಭ್ ಪಂತ್ ತಮ್ಮ ಸಂಭಾವನೆಯಲ್ಲಿ ಭಾರಿ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅವರ ಹೊಸ ವೇತನವು ಪ್ರಸ್ತುತ ಇರುವ ಸಂಬಳದ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿರಲಿದೆ ಎಂದು ವರದಿಗಳು ತಿಳಿಸಿವೆ. ಪಂತ್ ಅವರು 2016 ರಿಂದ 2024 ರವರೆಗೆ ಸತತ ಎಂಟು ಸೀಸನ್ಗಳಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ ನಡೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಆದರೆ ಲಕ್ನೋ ತಂಡದಲ್ಲಿದ್ದಾಗ ಪಂತ್ ಅವರಿಗೆ ತಮ್ಮ ಬೃಹತ್ ಮೊತ್ತಕ್ಕೆ ತಕ್ಕ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 2025 ಮತ್ತು 2026ರ ಸೀಸನ್ಗಳಲ್ಲಿ ಕಣಕ್ಕಿಳಿದಿದ್ದ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 2025ರ ಐಪಿಎಲ್ನಲ್ಲಿ 14 ಪಂದ್ಯಗಳಿಂದ ಕೇವಲ 269 ರನ್ ಗಳಿಸಿದ್ದ ಪಂತ್, ಇತ್ತೀಚೆಗೆ ಮುಕ್ತಾಯಗೊಂಡ 2026ರ ಆವೃತ್ತಿಯಲ್ಲಿ 14 ಪಂದ್ಯಗಳಿಂದ 312 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಪಂತ್ ಅವರ ಸಾಧಾರಣ ಪ್ರದರ್ಶನದ ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 2026ರ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಆಡಿದ 14 ಪಂದ್ಯಗಳಲ್ಲಿ ಕೇವಲ 4 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಪಂತ್ ಈಗ ಮತ್ತೆ ತಮ್ಮ ಹಳೆಯ ಗೂಡಿಗೆ ಮರಳಲು ಸಜ್ಜಾಗಿದ್ದಾರೆ.








