ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಗ್ರಾಮಸ್ಥರು ಇಟ್ಟಿಗೆ ಹಾಗೂ ಕಲ್ಲುಗಳಿಂದ ಸ್ಮಾರ್ಟ್ಫೋನ್ಗಳನ್ನು ಜಜ್ಜಿ ಪುಡಿಪುಡಿ ಮಾಡುತ್ತಿರುವ ವಿಚಿತ್ರ ದೃಶ್ಯ ಕಂಡುಬಂದಿದೆ. ಇದು ಸ್ಮಾರ್ಟ್ಫೋನ್ ವ್ಯಸನ, ಡಿಜಿಟಲ್ ಅವಲಂಬನೆ ಮತ್ತು ಇಂತಹ ಆತುರದ ನಿರ್ಧಾರಗಳು ಎಷ್ಟು ಮಟ್ಟಿಗೆ ಸಮರ್ಥನೀಯ ಎಂಬಿತ್ಯಾದಿ ವಿಷಯಗಳ ಕುರಿತು ಭಾರಿ ಚರ್ಚೆಗೆ ಕಾರಣವಾಗಿದೆ.
’X’ (ಟ್ವಿಟರ್) ವೇದಿಕೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋ ಕ್ಲಿಪ್ನಲ್ಲಿ, ಬಯಲು ಪ್ರದೇಶವೊಂದರಲ್ಲಿ ಹತ್ತಾರು ಜನರು ಒಟ್ಟಾಗಿ ಸೇರಿ ಮೊಬೈಲ್ ಫೋನ್ಗಳನ್ನು ಕಲ್ಲು ಮತ್ತು ಇಟ್ಟಿಗೆಗಳಿಂದ ಪದೇ ಪದೇ ಜಜ್ಜುತ್ತಿರುವುದನ್ನು ಕಾಣಬಹುದು. ನೆಲದ ಮೇಲೆ ನುಜ್ಜುಗುಜ್ಜಾದ ಫೋನ್ಗಳ ರಾಶಿಯೇ ಬಿದ್ದಿದ್ದು, ಹಾನಿಗೊಳಗಾದ ಕೆಲವು ಫೋನ್ಗಳಿಂದ ಹೊಗೆ ಬರುತ್ತಿರುವುದೂ ವರದಿಯಾಗಿದೆ.
ವೈರಲ್ ಪೋಸ್ಟ್ನ ಕ್ಯಾಪ್ಷನ್ (ಶೀರ್ಷಿಕೆ) ಪ್ರಕಾರ, ಈ ಗ್ರಾಮಸ್ಥರು ಸ್ಮಾರ್ಟ್ಫೋನ್ ವ್ಯಸನದಿಂದ ತೀವ್ರ ಬೇಸತ್ತು, ಒಟ್ಟಾಗಿ ಸೇರಿ ತಮ್ಮ ಸಾಧನಗಳನ್ನು ನಾಶಪಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಸಮುದಾಯವು ಈಗ ಹಳೆಯ ಮಾದರಿಯ ಸಾಮಾನ್ಯ ‘ಕೀ-ಪ್ಯಾಡ್’ ಫೋನ್ಗಳ ಬಳಕೆಗೆ ಮರಳಲು ತೀರ್ಮಾನಿಸಿದೆ ಎಂದೂ ಆ ಪೋಸ್ಟ್ನಲ್ಲಿ ಹೇಳಲಾಗಿದೆ.
ಆದರೆ, ಈ ಕೃತ್ಯದ ಹಿಂದಿನ ಅಸಲಿ ಕಾರಣ ಸ್ಮಾರ್ಟ್ಫೋನ್ ವ್ಯಸನವೇ ಆಗಿತ್ತೇ ಎಂಬುದಕ್ಕೆ ಯಾವುದೇ ಸ್ವತಂತ್ರ ಮೂಲಗಳಿಂದ ಧೃಢೀಕರಣ ಸಿಕ್ಕಿಲ್ಲ. ಈ ಘಟನೆ ನಡೆದ ನಿಖರವಾದ ಸ್ಥಳ ಮತ್ತು ಫೋನ್ಗಳನ್ನು ಧ್ವಂಸಗೊಳಿಸಲು ಕಾರಣವಾದ ಸನ್ನಿವೇಶಗಳು ಇನ್ನು ಸ್ಪಷ್ಟವಾಗಿಲ್ಲ. ಇಷ್ಟೆಲ್ಲಾ ಅನಿಶ್ಚಿತತೆಗಳಿದ್ದಾಗ್ಯೂ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಲಕ್ಷಾಂತರ ವೀಕ್ಷಣೆ ಹಾಗೂ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ವೈರಲ್ ವಿಡಿಯೋದಿಂದ ಶುರುವಾದ ಚರ್ಚೆ
ಈ ದೃಶ್ಯಾವಳಿಗಳು ಅಂತರಜಾಲದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ.
ಹೆಚ್ಚುತ್ತಿರುವ ಸ್ಕ್ರೀನ್ ಟೈಮ್ (ಮೊಬೈಲ್ ವೀಕ್ಷಣೆಯ ಸಮಯ) ಮತ್ತು ಸೋಶಿಯಲ್ ಮೀಡಿಯಾ ಅವಲಂಬನೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕೆಲವು ಬಳಕೆದಾರರು ಗ್ರಾಮಸ್ಥರನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇಷ್ಟೊಂದು ದುಬಾರಿ ಸಾಧನಗಳನ್ನು ನಾಶಪಡಿಸುವುದು ಎಷ್ಟು ಮಟ್ಟಿಗೆ ಬುದ್ಧಿವಂತಿಕೆಯ ನಿರ್ಧಾರ ಎಂದು ಪ್ರಶ್ನಿಸಿದ್ದಾರೆ.
ಇಂದಿನ ದಿನಗಳಲ್ಲಿ ಬ್ಯಾಂಕಿಂಗ್, ಶಿಕ್ಷಣ, ಸರ್ಕಾರಿ ಸೇವೆಗಳು ಮತ್ತು ಸಂವಹನಕ್ಕಾಗಿ ಸ್ಮಾರ್ಟ್ಫೋನ್ಗಳು ಅತ್ಯಗತ್ಯ ಸಾಧನಗಳಾಗಿವೆ, ಹೀಗಾಗಿ ಇಂದಿನ ಕಾಲದಲ್ಲಿ ಸಂಪೂರ್ಣವಾಗಿ ಕೀ-ಪ್ಯಾಡ್ ಫೋನ್ಗಳಿಗೆ ಮರಳುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಹಲವು ಬಳಕೆದಾರರು ಬೆರಳು ಮಾಡಿ ತೋರಿಸಿದ್ದಾರೆ.
ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿರುವುದು ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದ್ದು, ವೈರಲ್ ಆಗುತ್ತಿರುವ ಇಂತಹ ದಾವೆಗಳನ್ನು ಸಂಪೂರ್ಣವಾಗಿ ನಂಬುವ ಮುನ್ನ ಎಚ್ಚರದಿಂದ ಇರಬೇಕು ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಎಚ್ಚರಿಸಿದ್ದಾರೆ.
ಭಾರತದಲ್ಲಿ ಸ್ಮಾರ್ಟ್ಫೋನ್ ವಿರೋಧಿ ನಡೆ ಇದೇ ಮೊದಲಲ್ಲ
ಈ ವೈರಲ್ ಸುದ್ದಿಯ ಸತ್ಯಾಸತ್ಯತೆ ಇನ್ನು ಖಚಿತವಾಗದಿದ್ದರೂ, ಹೆಚ್ಚುತ್ತಿರುವ ಡಿಜಿಟಲ್ ವ್ಯಸನವನ್ನು ತಡೆಗಟ್ಟಲು ಭಾರತದ ಕೆಲವು ಸಮುದಾಯಗಳು ಇತ್ತೀಚಿನ ವರ್ಷಗಳಲ್ಲಿ ಇಂತಹ ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕಿರುವುದನ್ನು ಕಾಣಬಹುದು.
ಇದಕ್ಕೊಂದು ವಿವಾದಾತ್ಮಕ ಉದಾಹರಣೆ 2025 ರಲ್ಲಿ ರಾಜಸ್ಥಾನದಿಂದ ಕೇಳಿಬಂದಿತ್ತು. ಅಲ್ಲಿನ ಜಾಲೋರ್ ಜಿಲ್ಲೆಯ ಸಮುದಾಯ ಪಂಚಾಯತ್ವೊಂದು 15 ಹಳ್ಳಿಗಳ ಸೊಸೆಯಂದಿರು ಹಾಗೂ ಯುವತಿಯರ ಮೇಲೆ ಕೆಲವು ಕಟ್ಟುಪಾಡುಗಳನ್ನು ಹೇರಿತ್ತು.
ಅವರ ನಿರ್ಧಾರದ ಪ್ರಕಾರ, ಮಹಿಳೆಯರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಬಳಸುವಂತಿರಲಿಲ್ಲ ಮತ್ತು ಕೇವಲ ಸಂವಹನಕ್ಕಾಗಿ ಕೀ-ಪ್ಯಾಡ್ ಫೋನ್ಗಳನ್ನು ಮಾತ್ರ ಬಳಸಬೇಕಾಗಿತ್ತು. ಸಾಮಾಜಿಕ ಮೌಲ್ಯಗಳನ್ನು ಉಳಿಸಲು ಮತ್ತು ತಂತ್ರಜ್ಞಾನದ ದುರುಪಯೋಗವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮುದಾಯದ ಮುಖಂಡರು ವಾದಿಸಿದ್ದರು.
ಆದರೆ ಈ ನಿರ್ಧಾರವು ಮಹಿಳಾ ಹಕ್ಕುಗಳ ಹೋರಾಟಗಾರರು ಮತ್ತು ಸಾಮಾಜಿಕ ವಿಶ್ಲೇಷಕರಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಲಿಂಗದ ಆಧಾರದ ಮೇಲೆ ತಂತ್ರಜ್ಞಾನದ ಬಳಕೆಯನ್ನು ನಿರ್ಬಂಧಿಸುವುದು ತಾರತಮ್ಯದ ಮತ್ತು ಹಿಂದುಳಿದ ಚಿಂತನೆಯ ಸಂಕೇತ ಎಂದು ಅವರು ವಾದಿಸಿದ್ದರು.
एक गांव के सभी लोग मिलकर अपने अपने स्मार्ट फोन तोड रहे हैं,
इन लोगों का कहना है कि स्मार्ट फोन एक नशा टाइप का है, जिसकी लत लग रही है।
अब ये फोन नही रखेगें, फिर से keypad फोन रखना शुरू करेंगे। 👇 pic.twitter.com/yUGEXIuXEv
— Pappu Ram Mundru Sikar (@PRMundru) June 17, 2026








