ನವದೆಹಲಿ: ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಎದುರಾಗುವ ದೀರ್ಘ ಸರತಿ ಸಾಲುಗಳು ಮತ್ತು ಸ್ಥಳೀಯರು ಪದೇ ಪದೇ ಟೋಲ್ ಪಾವತಿಸಬೇಕಾದ ಸಮಸ್ಯೆಗೆ ಮುಕ್ತಿ ನೀಡಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವದ ಸುಧಾರಣೆಯನ್ನು ಜಾರಿಗೆ ತರಲು ಸಜ್ಜಾಗಿದೆ. ಟೋಲ್ ಗೇಟ್ಗಳ ಸಮೀಪದಲ್ಲಿ ವಾಸಿಸುವ ವಾಹನ ಸವಾರರಿಗೆ ಭಾರಿ ರಿಲೀಫ್ ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ‘ಡಿಜಿಟಲ್ ಇ-ಪಾಸ್’ (Digital E-Pass) ಸೇವೆಯನ್ನು ಪ್ರಾರಂಭಿಸಲು ಯೋಜಿಸಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಸ್ಥಳೀಯ ವಾಹನ ಸವಾರರು ಪದೇ ಪದೇ ಟೋಲ್ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ, ಪಾರದರ್ಶಕವಾಗಿ ಮತ್ತು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಲಾಭ
ಈ ನೂತನ ನಿಯಮ ಜಾರಿಗೆ ಬಂದರೆ, ಟೋಲ್ ಪ್ಲಾಜಾಗಳ ಸುತ್ತಮುತ್ತಲಿನ ನಿವಾಸಿಗಳು ಇನ್ನು ಮುಂದೆ ಟೋಲ್ ಗೇಟ್ಗಳ ಬಳಿ ಕಾಯುವ ಅಗತ್ಯವಿರುವುದಿಲ್ಲ. ಟೋಲ್ ಪ್ಲಾಜಾಗಳಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವಾಹನ ಮಾಲೀಕರಿಗೆ ವಿಶೇಷ ಡಿಜಿಟಲ್ ಪಾಸ್ಗಳನ್ನು ನೀಡಲಾಗುತ್ತದೆ.
ಫಾಸ್ಟ್ಟ್ಯಾಗ್ ಲಿಂಕ್: ಈ ಡಿಜಿಟಲ್ ಇ-ಪಾಸ್ ಅನ್ನು ನೇರವಾಗಿ ವಾಹನದ ಫಾಸ್ಟ್ಟ್ಯಾಗ್ (FASTag) ಖಾತೆಗೆ ಲಿಂಕ್ ಮಾಡಲಾಗುತ್ತದೆ. ಇದರಿಂದಾಗಿ ಸ್ಥಳೀಯ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಟೋಲ್ ಗೇಟ್ ದಾಟಬಹುದು.
ಕಡಿಮೆ ದರದಲ್ಲಿ ಪಾಸ್ ಸೌಲಭ್ಯ: ದಿನನಿತ್ಯ ಪ್ರಯಾಣಿಸುವ ಸ್ಥಳೀಯರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಮಾಸಿಕ (Monthly) ಮತ್ತು ವಾರ್ಷಿಕ (Annual) ಪಾಸ್ಗಳನ್ನು ಲಭ್ಯವಾಗುವಂತೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಡಿಜಿಟಲ್ ಮೂಲಕವೇ ಸ್ಥಳೀಯರ ಗುರುತಿಸುವಿಕೆ
ಸ್ಥಳೀಯ ನಿವಾಸಿಗಳ ಗುರುತನ್ನು ಡಿಜಿಟಲ್ ವ್ಯವಸ್ಥೆಯ ಮೂಲಕವೇ ಪರಿಶೀಲಿಸಿ, ಈ ವಿಶೇಷ ಪಾಸ್ ನೀಡಲಾಗುತ್ತದೆ. ಇದರಿಂದಾಗಿ ಅನಧಿಕೃತ ರಿಯಾಯಿತಿಗಳಿಗೆ ಬ್ರೇಕ್ ಬೀಳಲಿದ್ದು, ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ.
ಈಗಾಗಲೇ ಸಿದ್ಧತೆ:
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ಈ ಡಿಜಿಟಲ್ ಪಾಸ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮತ್ತು ಆದ್ಯತೆಯ ಮೇರೆಗೆ ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ನಗದು ರಹಿತ (Cashless) ವ್ಯವಹಾರವನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ, ಇದೀಗ ತರಲಿರುವ ಈ ಇ-ಪಾಸ್ ವ್ಯವಸ್ಥೆಯಿಂದಾಗಿ ವಾಹನ ಸವಾರರ ಅಮೂಲ್ಯ ಸಮಯ ಮತ್ತು ಹಣ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ.








