ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕ್ಷುಲ್ಲಕ ಕಾರಣಕ್ಕೆ ಸ್ವಂತ ಸ್ನೇಹಿತನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಕನಿಗೆ ಮೊಬೈಲ್‌ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಸ್ನೇಹಿತನೊಬ್ಬ, ತನ್ನ ಗ್ಯಾಂಗ್ ಜೊತೆ ಸೇರಿ ಯುವಕನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಇಡೀ ಗ್ರಾಮ ಸದ್ಯ ಆತಂಕ ಮತ್ತು ದಿಗಿಲಿನಲ್ಲಿ ಮುಳುಗಿದೆ.
ಮಹೇಶ್ ಎಂಬಾತನೇ ಕೊಲೆಯಾದ ದುರ್ದೈವಿ: ಭೀಮನಹಳ್ಳಿ ಗ್ರಾಮದ ನಿವಾಸಿಯಾದ ಮಹೇಶ್ (34) ಕೊಲೆಯಾದ ದುರ್ದೈವಿ. ಈತ ಸ್ಥಳೀಯವಾಗಿ ಯುವಕರ ತಂಡವೊಂದರ ಜೊತೆ ಆಪ್ತ ಒಡನಾಟ ಹೊಂದಿದ್ದನು. ಆರೋಪಿಗಳು ಮತ್ತು ಮಹೇಶ್ ಇಬ್ಬರೂ ಒಂದೇ ಸ್ನೇಹ ಬಳಗದಲ್ಲಿ ಗುರುತಿಸಿಕೊಂಡಿದ್ದರು. ದಿನನಿತ್ಯ ಜೊತೆಯಾಗಿಯೇ ಇರುತ್ತಿದ್ದ ಸ್ನೇಹಿತರೇ ಇಂದು ಮಹೇಶ್ ಪ್ರಾಣಪಕ್ಷಿ ಹಾರಲು ಕಾರಣರಾಗಿದ್ದಾರೆ.
ಹತ್ಯೆಗೆ ಅಸಲಿ ಕಾರಣವೇನು?: ಕೊಲೆಯಾದ ಮಹೇಶ್, ತನ್ನದೇ ಸ್ನೇಹ ಬಳಗದಲ್ಲಿದ್ದ ಓರ್ವ ಸ್ನೇಹಿತನ ಅಕ್ಕನಿಗೆ ನಿರಂತರವಾಗಿ ಮೊಬೈಲ್‌ನಲ್ಲಿ ಸಂದೇಶಗಳನ್ನು (ಮೆಸೇಜ್) ಕಳುಹಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ಇತ್ತೀಚೆಗೆ ಆಕೆಯ ತಮ್ನನಿಗೆ ತಿಳಿದುಬಂದಿದೆ. ತನ್ನದೇ ಜೊತೆಗಿದ್ದುಕೊಂಡು ತನ್ನ ಅಕ್ಕನಿಗೆ ಮೆಸೇಜ್ ಮಾಡುತ್ತಿದ್ದ ಮಹೇಶ್ ವರ್ತನೆಯಿಂದ ಆಕ್ರೋಶಗೊಂಡ ತಮ್ಮ, ಹೇಗಾದರೂ ಮಾಡಿ ಆತನಿಗೆ ಬುದ್ಧಿ ಕಲಿಸಲೇಬೇಕೆಂದು ಸಂಚು ರೂಪಿಸಿದ್ದಾನೆ.
ಮನೆಯಿಂದ ಕರೆತಂದು ಚಾಕುವಿನಿಂದ ಇರಿತ: ಯೋಜನೆಯಂತೆ ಆರೋಪಿ ಯುವಕ ಹಾಗೂ ಆತನ ನಾಲ್ಕೈದು ಜನರ ಸ್ನೇಹಿತರ ಪಟಾಲಂ ಮಹೇಶ್ ನಿವಾಸಕ್ಕೆ ತೆರಳಿದೆ. ಎಂದಿನಂತೆ ಮಾತನಾಡಲೆಂದು ಮಹೇಶ್‌ನನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಮೆಸೇಜ್ ವಿಚಾರವಾಗಿ ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಸ್ನೇಹಿತರ ತಂಡ, ತಾವು ತಂದಿದ್ದ ಚಾಕುವಿನಿಂದ ಮಹೇಶ್‌ಗೆ ಮನಬಂದಂತೆ ಇರಿದು ಸ್ಥಳದಲ್ಲೇ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ, ಓರ್ವನ ಬಂಧನ: ವಿಷಯ ತಿಳಿಯುತ್ತಿದ್ದಂತೆ ಕಿರುಗಾವಲು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಾಥಮಿಕ ಮಾಹಿತಿ ಹಾಗೂ ತನಿಖೆಯ ಆಧಾರದ ಮೇಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ನಾಲ್ಕೈದು ಜನ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








